ಭಾನುವಾರ, ಡಿಸೆಂಬರ್ 24, 2017

ಕಾವ್ಯ ಲಹರಿ

   
             ■ ಟ್ರಾಫಿಕ್ ಬದುಕು ■

ಬರಿದಾದ ಬದುಕಲೀ ನಾ ಏನ ಹೇಳಲಿ?
ತುಂಬಿದ ಗಾಡಿಯು ನಿಂತಿದೆ ನಡುದಾರೀಲಿ!!
ಮುಂದಕ್ಕೆ ಹೋಗದು; ಹಿಂದಕ್ಕೆ ಬಾರದು
ಆದರೂ ಸೌಖ್ಯವಿದೆ ಈ ಬಾಳ ಪಯಣದಲಿ..

ನೂರಾರು ಗಾಡಿಗಳು ಅಡಿಗಡಿಗೆ ನಿಂತಿವೆ,
ಮುಂದಾಗಿ ನಾಮುಂದು ತಾಮುಂದು ಎನ್ನುತಿವೆ!
ಬಿಳಿಪಟ್ಟಿಯ ಹಾದೀಲಿ ಸಾಗುವುದೇ ಬಲುಮೇಲು
ಯಾಕಯ್ಯ? ಈ ಬೇನೆ ಕತ್ತ ಹಿಸುಕಿದಂತಿದೆ...!

ಹಿಂದಿದ್ದ ಮೋಟಾರೀಗ ಪಕ್ಕದಲಿ ನಿಂತಿದೆ
ಮುನ್ನುಗ್ಗುವ ಬರದಲ್ಲಿ ಪೈಪೋಟಿ ನೀಡುತಿದೆ..
ಬಸ್ಸಾದರೇನು?ಕಾರಾದರೇನು? ಭಗವಂತನ 
ಈ ಬವಣೆಯ ಅನುಭವಿಸದೆ ವಿಧಿಯಿಲ್ಲ!!

ಕೆಲವೊಮ್ಮೆ ಹೀಗನ್ನಿಸುತ್ತದೆ...
ಮೋಟಾರು ಬಿಟ್ಟು ನಡೆದೇ ನಾ ಗುರಿಮುಟ್ಟಲೇ?!
ಮರುಕ್ಷಣವೇ.... ಆತ್ಮಾವಲೋಕನ-
"ನಿಸರ್ಗ ನಿಯಮ ಉಲ್ಲಂಘಿಸಿ ಬಾಳು ಸಾಗಲು ಸಾಧ್ಯವೇ?"
                         
                               -ಎಂ.ಕೆ.ಹರಕೆ





                   ◆  ರೈತನ ದನಿ ◆

ಕೇಳಿಸಿತು ಈ ಕಾಲದಿ ಅನ್ನದಾತನ ಅಳಲು
ಹೊರಟಿತು ಎನ್ನಯ ಕಾಯ ಅವನಿದ್ದ ಕಣರಂಗಕೆ....
ಮನಸ್ಸಿಲ್ಲದೆ ಸಾಗಿದ ಈ ಹೃದಯ ಬಾಗಿಲು
ತೆರೆಯಿತು ಮರೆಯಲ್ಲಿ ನಿಧಾನ ಕೃಷಿ ಕಾಯಕಕ್ಕೆ...

ಕೃಷಿ ಕೇವಲ ರೈತನಭ್ಯುಯದ ಕಾಯಕವಲ್ಲ 
ರಿಷಿ-ಸಂತರೂ ಕೈಮುಗಿದು ಸೇವಿಪ ಭಿಕ್ಷಾನ್ನ...
ಪ್ರತಿ ಜನ-ಮನವೂ ದಿನನಿತ್ಯ ಭೋಗಿಸುವ ಆಹಾರ 
ರೈತನ ಬೆಳೆಯಿಂದಲೇ ಜಾನುವಾರಗಳಿಗೂ ಮೇವು...

ರೈತ........?
ತೀಕ್ಷ್ಣ ವಿಷಯದಿ ಬೆರೆತು ತಾ ಮೈಮರೆಯಲಾರ
ಅವನ ಕಾರ್ಯದಲಿ ವಿಜ್ಞಾನ ಅಡಗಿರುವುದವನಿಗರಿವಿಲ್ಲ...
ಭತ್ತ ಕೇರುವ ಮುನ್ನ ಸಾಂದ್ರತೆ ಪರೀಕ್ಷಿಸಲಾರ
ಆದರೂ ಮಹಾಜ್ಞಾನವಂತನು ಕೃಷಿ ವಿಜ್ಞಾನ ಭೋದೆಯಲಿ....

ರಸಋಷಿಯ ಕಾವ್ಯದಲಿ ರೈತ-ನೇಗಿಲಯೋಗಿ
ಕಾಯಕದಲ್ಲೇ ದೇವರ ಕಾಣುವ ಮಹಾತ್ಯಾಗಿ....
ಪರಿಶ್ರಮದ ಕೂಸಾಗಿ ಗೇಯುವನು ಪ್ರತಿನಿತ್ಯ 
ಕಿಂಚಿತ್ತೂ ತನಗಾಗಿ ಗಳಿಸಿಲ್ಲ ಇದು ಸತ್ಯ....

ಸೈನಿಕನ ಆರ್ಭಟ ಕೇಳ್ಪುದು ರಣರಂಗದಲಿ
ರೈತನ ಹೋರಾಟ ತಾ ದುಡಿವ ಕಣದಂಗಳದಲಿ...
ಶಾಸ್ತ್ರಿಯ ಘೋಷಣೆಗೆ ಇವರೀರ್ವರೆ ಸ್ಫೂರ್ತಿ
ಕಣ-ಕಣದಲೂ ಮೊಳಗಲಿ "ಜೈ ಜವಾನ್, ಜೈ ಕಿಸಾನ್"..
                        
                                         -ಎಂ. ಕೆ. ಹರಕೆ





              ■ ಪ್ರೇಮಾಂತರಂಗ ■

ಸಹಸ್ರಾರು ದ್ವೀಪ,ಸುರಂಗ,ಮಾಯಾಲೋಕವೆ
ಎದುರಾದರೂ ನಾ ನಿನ್ನ ಬಿಡೆನು ಗೆಳತಿ...
ಬಾರದ ಲೋಕಕ್ಕೆ ಹೊರಟರೂ ನಿನ್ನ ನಾ,ಬಿಡದೆ
ಹಿಂಬಾಲಿಸುವೆ ಪ್ರೇಮಮುಗ್ಧನಂತೆ...
ನಿನ್ನ ಆ ಮೊದಲ ತೊದಲು ಮಾತೇ ಸಾಕು ಎನ್ನ 
ಈ ಹೃದಯಾಂತರಂಗಕೆ....
ನೀನಾಗೆ ಬಾ ಗೆಳತಿ ಎನ್ನ ಹೃದಯ ಮಂದಿರಕೆ
ಪೂಜೆಯ ವೇಳೆಗೆ ನೀ ತಡಮಾಡದೆ 
ಒಲುಮೆಯ ಘಂಟೆಯನು  ಬಾರಿಸುವೆ ಅನುಕ್ಷಣದಿ,
ನಿನ್ನೊಂದಿಗೆ ನಾನಿರುವ ಪ್ರತಿಗಳಿಗೆಯಲೂ...
ಕನಸು-ಮನಸುಗಳು ಬೆರೆತು ಹರುಷದಿ ಕುಣಿದಿರಲು ಪ್ರೇಮಾತರಂಗವು ಭಯದಿಂದ ಕುದಿಯುತಿರೆ...
ಎಲ್ಲಿ ನೀ ನನ್ನ ತ್ಯಜಿಸಿ ಪೋಗುವೆಯೆಂದು  ತನ್ನ 
ತಾನೇ ಬೇಲಿಯನ್ನು ಕಟ್ಟಿಕೊಂಡಿದೆ...
                                  -ಎಂ.ಕೆ.ಹರಕೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಮೌನಜ್ವಾಲೆ

ಹಾಡು ಬರೆಯಬೇಕು ಅಳುವ ಮರೆಯಬೇಕು ಮಾತು ಮುಗಿದ ಮೇಲೆ ವಿರಹ ಮೌನಜ್ವಾಲೆ! ಯಾವ ಭೀತಿಯಲ್ಲಿ ಯಾರ ಪ್ರೀತಿಯಲ್ಲಿ ಏನೂ ಹೇಳಲಾರೆನು ಕೂಡಿ-ಕಳೆಯಲಾರೆನು! ಅಂದವಾದ ಮೈಸಿರಿ ಕಳೆದು...