ಮಂಗಳವಾರ, ಮಾರ್ಚ್ 22, 2022

ಸುಳ್ಳು

( ಚಿತ್ರಕೃಪೆ : ಅಂತರ್ಜಾಲ )


ಸುಳ್ಳನ್ನೇ ಬಿತ್ತಿ

ಸುಳ್ಳನ್ನೇ ಬೆಳೆದು

ಸುಳ್ಳನ್ನೇ ಬಿಡಿಸಿ, ಬೀಸಿ, ಜೀರ್ಣಿಸಿ

ಸುಳ್ಳಲ್ಲೇ ಜೀವಿಸಿ

ಸುಳ್ಳಲ್ಲೇ ಸುಳಿದಾಡಿ

ಸುಳ್ಳಲ್ಲೇ ತಿಳಿಯಾದ ಕನಸು ಕಾಣುವ ಕಂಗಳು..


ನೀ ಕಾಣುತ್ತಿರುವುದು ಸುಳ್ಳು;

ಸುಳ್ಳೇ ನಿನ್ನನ್ನು ಮತ್ತಷ್ಟು ಸುಳ್ಳಿಗನಾಗಿಸಿದೆ.

ಹೀಗೆ, ಮುಂದುವರೆದರೆ

ಸುಳ್ಳಿನ ಸುಳಿಯಲ್ಲಿ

ನಿನ್ನ

ಕನಸುಗಳು ಸುಳ್ಳಾಗುವವು!

ಮನಸುಗಳು ಹೋಳಾಗುವವು!ಈ ಶುದ್ಧಸತ್ಯವನ್ನು

ಅರಿಯದೆ ಹೋದರೆ?

ಸುಳ್ಳು ನಾಲಗೆಯ ಪರಮಸ್ಥಾನಿಯಾಗುವುದು!

ಅನೃತವೇ ಅಮೃತದ ಸವಿಯ ನೀಡಲುಬಹುದು!


ಸುಳ್ಳೇ ಸೋಪನವಾಗಿ

ಸುಳ್ಳೇ ಸರಳವಾದ

ಜೀವನ ಮಾರ್ಗವಾಗಿಯೂ ಬಿಡಬಹುದು!

ಸದ್ದಿಲ್ಲದೆ

ಸುಂದರ ಸುಳಿಗೆ ಸಿಲುಕಿಸಿ

ಬದುಕ 'ಸುಲಿಗೆ' ಮಾಡಿ ಬಿಡಬಹುದು!
ಸುಳ್ಳು ಹೇಳುವವನಿಗೆ 

ಸುಳ್ಳು 

ಸೊಳ್ಳೆಯಷ್ಟೇ ಸಣ್ಣದಾಗಿ ಕಂಡರು,

ಅದರಿಂದ 

ಸಿಡಿಯುವ ಅವಿಶ್ವಾಸ ಸಲೀಸಾಗಿ

ಸರಳ

ಹೃದಯವನ್ನು ಸೀಳಿ

ಸರಪಳಿಯಲ್ಲಿ ಕಟ್ಟಿ

ಹೇಳದೆ ಕೇಳದೆ ಹುಳಿಹಿಂಡಿ ಹಿಂಸಿಸುವುದು..!

ಸಂಯಮದ ಮನಸ್ಥಿತಿ

ವಿಕಾರವಾಗಿ 

ನರಳಿ ನರಳಿ

ಸಂದಿಗ್ಧತೆಯ ಸವಾಲಿಗೆ 

ಸೋತು ಸೋತು ಸುಣ್ಣವಾಗುವುದು!


ಸುಳ್ಳೇ,

ಸಮಯವ ವ್ಯರ್ಥ ವ್ಯಯಿಸದಿರು..


ಸಾಕಿನ್ನು

ಈ ಸುಳ್ಳಿನ ಸೊಲ್ಲು!

ಸರಿಮಾಡಿ

ನಿನ್ನ ಬದುಕನು ಗೆಲ್ಲು!ಈ ಸುಳ್ಳಿನ ಸುಳಿಯಿಂದ

ನುಸುಳಿ

ಬಹಳ ಕಾಲದ ಸರಳ ಜೀವನಕ್ಕೆ

ಮರಳಿ

ನಳನಳಿಸಿ ಬೆಳಗುವ ಬೆಳ್ಳಿಯಾಗು!!


 

ಕಾಯ್ದು ಕುಳಿತಿರುವೆ!!~ ಎಂ.ಕೆ.ಹರಕೆ


ಭಾನುವಾರ, ಫೆಬ್ರವರಿ 13, 2022

ಬಚ್ಚಿಟ್ಟ ಪ್ರೀತಿ

.
ಐದಾರು ವರ್ಷಗಳ ಹಿಂದಿನ ಮಾತು!
ನಮ್ಮ ಕಥೆ ಶುರುವಾಗಿ..
ದಿನ ಕಳೆದದ್ದೇ ಗೊತ್ತಾಗಲಿಲ್ಲ, ನೋಡು..
ಬಹಳ ನೆನಪಿಲ್ಲ.. ಆದರೆ ಮರೆಯೋ ಕಥೆಯೇ ನಮ್ಮಿಬ್ಬರದು..?
ಅದೆಂಗ್ ಮರೆಯಕ್ ಆಗುತ್ತೆ.. ಆ ಕ್ಷಣ! ಆ ಹೊತ್ತು ! 
ಅಬ್ಬಾ, ನೆನಸಿಕೊಂಡ್ರೆ ಈಗ್ಲೂ ಹೊಟ್ಟೇಲಿ ಚಿಟ್ಟೆ ಬಿಟ್ಟಂಗ್ ಆಗುತ್ತೆ..!
.
ಸಿಂಪಲ್ಲಾಗಿ, ಸಿಂಗಲ್ಲಾಗಿ ಓಡಾಡಿಕೊಂಡಿದ್ದ್ ನನ್ ಮುಂದೆ ನೀ ಬಂದೆ.. ಅವತ್ತು ನಮ್ಮಿಬ್ಬರಿಗೂ ಫಸ್ಟ್ ಡೇ ಆಫ್ ಕಾಲೇಜ್.. ಅಷ್ಟೇ ಅಲ್ಲ ಅವತ್ತೇ ಆ ನಿನ್ನ ಮುದ್ದು ಮುಖ ನನ್ನ ಕಣ್ಣಲ್ಲಿ ಸೆರೆಯಾದದ್ದು! 

.
ಅತ್ತ- ಇತ್ತ, ಸುತ್ತ- ಮುತ್ತ ಎಲ್ಲಿ ನೋಡಿದರೂ ಆ ದಿನ, ನಿನ್ನ ಮೊದಲ ನೋಟದ ಮುಖಚಿತ್ರ ಬಿಟ್ಟು ಬೇರೇನೂ ಕಾಣಿಸ್ತಿರಲಿಲ್ಲ. ನಾನ್ ಫಸ್ಟ್ ಟೈಮ್ ಎಲ್ಲವನ್ನೂ ಕಳೆದುಕೊಂಡು ಬರಿದಾಗಿ ಹೋಗಿದ್ದೆ. ಪ್ರೇಮಸಿಂಚನದ ನವಿರಾದ ಭಾವ ಎದೆಯಲ್ಲಿ ಪಿಸುಗೊಡಲು ಶುರುಮಾಡಿತ್ತು.

.
ನಿನ್ನ ರಾಗ-ಭಾವಗಳ ಸುಳಿಯಲ್ಲಿ ಆಡಾಡ್ತಾನೇ ಸಮಯ ಕಳೆದು ಹೋಯಿತು. ಫಸ್ಟ್ ಇಯರ್ ಮುಗದಿದ್ದೆ ಗೊತ್ತಾಗಲಿಲ್ಲ. ಫ್ಯೂಚರ್ ನೆಲ್ಲಾ ಸೈಡಿಗಿಟ್ಟು , ಓನ್ಲಿ ಪ್ರೆಸೆಂಟ್ ಅಲ್ಲಿ ಬದುಕ್ತಿದ್ದ ಕಾಲ ಅದು. ಅದರಲ್ಲಿ ನನಗೆ ನೆಮ್ಮದಿ ಇತ್ತು, ಸೌಖ್ಯವಿತ್ತು.
 ಇಡೀ ವರ್ಷ ಕಳೆದರೂ, ನಿನ್ನ ಮೇಲೆ ನಂಗ್ ಚೂರು ಅಭಿಮಾನ ಇದೆ; ಅದು ಇತ್ತೀಚ್ಗೇ ಪ್ರೀತಿಯಾಗಿ ರೂಪಾಂತರಗೊಳ್ಳುತ್ತಿದೆ ಅನ್ನೋ ಮ್ಯಾಟ್ರು, ನಿನಗೆ ಗೊತ್ತಾಗುವ ಯಾವ್ದೆ ಸಂದರ್ಭ ಕೂಡಿ ಬರಲೇ ಇಲ್ಲ.. ಆದರೆ ಈ ಗ್ಯಾಪಲ್ಲಿ ಡೈರೆಕ್ಟ್ ಆಗಿ ಅಲ್ದಿದ್ರು , ಒಂದೆರಡು ಸಲ ನಿನ್ನ ಜೊತೆ ಬಾಯ್ ಬಿಚ್ಚಿ ಮಾತಾಡಿದ ಕ್ಷಣಗಳು ನನ್ನನ್ನು ಎಂದಿನಂತೆ ಜೀವಂತವಾಗಿ ಇಟ್ಟಿದ್ವು...

.
ಸುಮಾರು ಒಂದೂವರೆ ವರ್ಷಗಳ ಕಾಲ ನನ್ನೊಳಗೆ ಬಚ್ಚಿಟ್ಟಿದ್ದ ಅವಿರತ ಪ್ರೇಮವಿರಹ ಸಾಲುಗಳು ಪುಸ್ತಕ ಒಂದರಲ್ಲಿ ಬೆಚ್ಚಗೆ ಮಲಗಿದ್ದವು. ಆ ಪುಸ್ತಕ ಅಕಸ್ಮಾತ್ತಾಗಿ ನನ್ನ ಸ್ನೇಹಿತೆಯ ಕೈಗೆ ಸಿಕ್ಕಿಬಿಟ್ಟಿತು. ಬಚ್ಚಿಟ್ಟ ಪ್ರೀತಿ ಬಣ್ಣದ ಚಿಟ್ಟೆಯಾಗಿ ಹಾರಿಬಂದು ಬೇರೊಬ್ಬರಿಗೆ ತಿಳಿಯುವ ಹಾಗಾಯಿತು. ಇದರಿಂದ ನಾನು ಕೊಂಚ ಗಲಿಬಿಲಿ ಆದೆ. ದಿಗ್ಭ್ರಾಂತನಾಗಿ ಕಲ್ಲಿನಂತೆ ಕುಳಿತು ಬಿಟ್ಟೆ. ನನ್ನ ಸ್ನೇಹಿತೆ ನಂಕಿಂತ ಇಮೋಷನಲ್.. ಅದೆಷ್ಟು ಅಂದ್ರೆ, ಪುಸ್ತಕವನ್ನೆಲ್ಲ ಬಿಡದೆ ಒಂದೇ ಉಸಿರಲ್ಲಿ ಓದಿ ಮುಗ್ಸಿ ದೌಡಾಯಿಸಿ ನನ್ನ ಬಳಿ ಬಂದಳು. ಬಂದ ಆಕೆ ಹಾಗೆ, ನನ್ನನ್ನೊಮ್ಮೆ ದಿಟ್ಟಿಸಿ ನೋಡಿ, ಹತ್ತಿರ ಬಂದು ಬಾಚಿ ತಬ್ಬಿ ಕಣ್ಣೀರಾದಳು. ಹೌದು ನನ್ನಮ್ಮ; ನನ್ನ ಜೀವನಾಡಿ.. ಅತ್ಯಂತ ಭಾವನಾ ಜೀವಿ.. ಅಂಡ್ ಶೀ ಇಸ್ ಮೈ ಬೆಸ್ಟ್ ಫ್ರೆಂಡ್!

.
ಇನ್ನೇನು,
ಪಿಯು ಪರೀಕ್ಷೆಗೆ ಕೌಂಟ್ಡೌನ್ ಶುರು ಆಗಿತ್ತು. ಕ್ರಮೇಣ ನೀನಂತೂ ಕ್ಲಾಸಿಗಿಂತ ಲೈಬ್ರರಿಲೇ ಜಾಸ್ತಿ ಟೈಮ್ ಸ್ಪೆಂಡ್  ಮಾಡ್ತಿದ್ದೆ.. 'ಗ್ರಂಥಾಲಯ' ಎಂದು ದೊಡ್ಡದಾಗಿ ಬರೆದಿದ್ದ ಬೋರ್ಡ್ ಕೂಡ ನೋಡದೆ ಇದ್ದ ನಾನು, ನಿನ್ನಿಂದಾಗಿ ಇಲ್ಲಿನ ಕಾಯಂ ಅಭ್ಯರ್ಥಿ ಆಗ್ಬಿಟ್ಟೆ. ಯಾವಾಗ್ಲೂ ಹಾಡು-ಹರಟೆ, ಸಿನಿಮಾ- ನಾಟಕ, ಕ್ರಿಕೆಟ್ಟು- ಕವನ ಅಂತ ಕ್ಲಾಸಿನಿಂದ ಹೊರಗೆ ಇರ್ತಿದ್ದ ನನ್ನನ್ನು , ನಮ್ ಟೀಚೆರ್ಸ್ ತೀರಾ ಹತ್ತಿರದಿಂದ ಕಂಡು ಆಶ್ಚರ್ಯ ಪಟ್ಟಿದ್ದೂ ಇದೆ. ಅಂತೂ ಇಂತೂ ನಿನ್ನ ಕೃಪೆಯಿಂದ, ನಾನೂ ಕೂಡ ಕೊಂಚ ಸಂಭಾವಿತ ವಿದ್ಯಾರ್ಥಿ ಅಂತ ಅನ್ನಿಸ್ಕೊಂಡಿದ್ದು ನಿಜ...!

.
ಹೀಗಿರುವಾಗ ಒಂದಿನ ಫ್ರೆಂಡ್ಸ್ ಎಲ್ಲ ಕ್ಲಾಸ್ರುಮಲ್ಲಿ ಒಟ್ಟಿಗೆ ಕೂತು ಹರಟೆ ಹೊಡಿತ್ತಿದ್ದರು. ಮೋಸ್ಟ್ಲಿ ಎಕ್ಸಾಂ ಡೇಟ್ ಅನೌನ್ಸ್ ಆಗಿತ್ತು ಅನ್ಸುತ್ತೆ. ಅದು ಅಲ್ಲದೆ ಅವತ್ತು ಕಾಲೇಜ್ ಲಾಸ್ಟ್ ವರ್ಕಿಂಗ್ ಡೇ. ಫ್ರೆಂಡ್ಸ್ ಎಲ್ಲ ಫುಲ್ ಇಮೋಷನಲ್!  ಸ್ಲ್ಯಾಮ್ ಅದು ಇದು ಅಂತ ಸಿಕ್ಕಾಪಟ್ಟೆ ಬಿಜಿ಼ ಆಗಿದ್ರು. ನಾನ್ ನನ್ ಪಾಡಿಗೆ ಲಾಸ್ಟ್ ಬೆಂಚಲ್ಲಿ ಕೂತು, ಬೇಸಿಕ್ ಸೆಟ್ಟಲ್ಲಿ ಸೀರಿಯಸ್ಸಾಗಿ ಕ್ರಿಕೆಟ್ ಸ್ಕೋರ್ ಚೆಕ್ ಮಾಡ್ತಿದ್ದೆ..

.
ಅವತ್ ಯಾಕೋ ನೀ ಮಾತ್ರ ಬೆಳಿಗ್ಗೆ ಇಂದ ಡೆಸ್ಕ್ ಮೇಲೆ ತಲೆ ಹಾಕ್ದೋಳು, ಮೇಲಕ್ ಎದ್ದೆ ಇರಲಿಲ್ಲ. ಏನಾಯ್ತ್ ಈ ಪ್ರಾಣಿಗೆ.. ನಿನ್ನೆಯವರೆಗೂ ಚೆನ್ನಾಗೇ ಇದ್ಳಲ್ಲ! ಅಂತ ಅನ್ನಿಸಿದ್ರು, ಪಾಪ ಹುಷಾರ್ ಇರಲಿಕ್ಕಿಲ್ಲ.. ಅನ್ಕೊಂಡು.. ಧೈರ್ಯ ಮಾಡಿ ಇವತ್ತಾದ್ರೂ ನಿನ್ನ ಮಾತಾಡಿಸ್ಲೇ ಬೇಕು ಅಂತ ಡೆಸ್ಕಿಂದ ಮೇಲಕ್ಕೆದ್ದೆ. ಇನ್ನೇನು ಎರಡು ಹೆಜ್ಜೆ!! ನಿನ್ನ ತಲುಪಿ ಮಾತನಾಡುವಷ್ಟರಲ್ಲಿ- ನೀನು ಸಡನ್ ಆಗಿ ಮೇಲಕ್ಕೆದ್ದು ಕ್ಲಾಸಿನಿಂದ ಹೊರನಡೆದೆ. ಯಾಕಂತ ಗೊತ್ತಾಗಲಿಲ್ಲ..
 "ಇನ್ನೂ 10 ನಿಮಿಷ ಬಾಕಿ ಇದೆ ಕಣೆ"- ಅಂತ ನಿನ್ನ ಫ್ರೆಂಡ್ ಒಬ್ಳು ಕೂಗಿ ಹೇಳಿದ್ಳು, ಅದೂ ಕೂಡ ನಿನಗ್ ಕೇಳಿಸ್ತೋ ಇಲ್ವೋ.. ಸಪ್ಪೆ ಮುಖ ಮಾಡಿ ಬಸ್ ಸ್ಟಾಪಿನ ಕಡೆ ಹೊರಟು ಬಿಟ್ಟೆ. ನಾನು ಸ್ವಲ್ಪ ಕಾಲ ಕಸಿವಿಸಿಯಾದೆ. ದಿಕ್ಕು ತೋಚದೆ ನಿರಾಶನಾದೆ. ಅರೆಮಗ್ನನಾಗಿಯೇ ಕ್ಲಾಸಿಂದ ಕಾಲ್ಕಿತ್ತೆ..

.
ಪಾರ್ಕಿನ ಹೂದೋಟದ ಅಂಚಿನ ಕಲ್ಲಿನ ಮೇಲೆ ಕುಳಿತು ಫಸ್ಟ್ ಟೈಮ್ ಫ್ಯೂಚರಿಸ್ಟಿಕ್ ಆಗಿ ತಿಂಕ್ ಮಾಡೋಕ್ ಶುರು ಮಾಡದೆ. ಯೋಚ್ನೆ ಮಾಡಿದಷ್ಟು ತಲೆ ಭಾರವಾಯಿತು. ಅಷ್ಟರಲ್ಲಿ ಸ್ಪುಟವಾಗಿ ಏನನ್ನೋ ಬರೆದಿದ್ದ ಕೆಲ ಹಾಳೆಗಳು ಹಾರಿ ಬಂದು ನನ್ನೆದುರು ಬಿದ್ದವು. ಹಾಗೆ ಕಣ್ಣರಳಿಸಿ ಓದಲು ಸಂಜೆಗತ್ತಲು ಅಡ್ಡಿಯಾಯಿತು. ಕುತೂಹಲಕ್ಕೆ ಹಾಳೆಗಳನ್ನು ಸ್ಟ್ರೀಟ್ ಲೈಟಿಗೆ ಓರೆಯಾಗಿ ಹಿಡಿದು ಓದೋಕೆ ಶುರು ಮಾಡಿದೆ. ಹಿಂದೊಮ್ಮೆ ನನ್ನ ತಾಯಿ ಓದಿದ, ನಾ ಬರೆದ ಸಾಲುಗಳಂತೆಯೇ ಯಾರೋ ಒಬ್ಬರು ನನ್ನ ಕುರಿತು ಗೀಚಿದ್ದ ಸಾಲುಗಳು ಕಂಡವು. ನನಗಂತೂ ಒಂದು ಕ್ಷಣ ಆಶ್ಚರ್ಯ, ರೋಮಾಂಚನದ ಅನುಭೂತಿ.. ಖುಷಿ-ಭಯ-ಕಳವಳ ಎಲ್ಲವೂ ಒಟ್ಟೊಟ್ಟಿಗೆ ಆವರಿಸಿದವು..  ಅಬ್ಬಾ, ಇದೇನಿದು.. ನನ್ನ ಬಗ್ಗೆ... ಯಾರು ಬರೆದಿರಬಹುದು? ಅಂತ ಹಲ್ಲು ಕಚ್ಚಿಕೊಂಡು ಕೂತೆ.. 
ಈ ಮಧ್ಯೆ ಒಂದು ಹುಡುಗಿ ಹಾರಿ ಹೋಗುತ್ತಿದ್ದ ಪತ್ರಗಳನ್ನು ಆಯುತ್ತಾ ಬರುತ್ತಿದ್ದಳು. ಇವಳೇ ಇದನ್ನು ಬರೆದಿರಬಹುದೇ! ಯಾರಿವಳು!  ಯಾರಿರಬಹುದು? ಎಂದು ಕಣ್ಣಗಲಿಸಿ ನೋಡಿದೆ, ಕಣ್ಣರಳಿಸಿ ನೋಡಿದೆ..  ಸ್ವರ್ಗದಾಚೆಗಿನ ಕಾಣದ ಬಾಗಿಲೊಂದು ರಪ್ ಅಂತ ತೆರೆದಂತೆ ಭಾಸವಾಯಿತು.. ಮತ್ತೊಮ್ಮೆ ಎವೆಯಿಕ್ಕದೆ ನೋಡಿದೆ..
ಅದೃಷ್ಟಕ್ಕೆ ಆ ಹುಡುಗಿ ನೀನೇ ಆಗಿದ್ದೆ!!!. 

★ ★ ★ ★ ★ ★ ★ ★ ★ ★ ★ ★ ★ ★ ★ ★ 


"ಇವತ್ತೇ ಕಾಲೇಜ್ ಲಾಸ್ಟ್ ಡೇ, ಇನ್ಮುಂದೆ ಇವ್ನ್ ನೋಡಕ್ ಸಿಗೋದಿಲ್ಲ.. ನಮ್ಮಿಬ್ಬರ ಭೇಟಿ ಅಪರೂಪದಲ್ಲಿ ಅಪರೂಪ, ಮುಂದೆ ನಾನೆಲ್ಲೋ.. ಅವನ್ನೆಲ್ಲೋ"-  ಹೀಗೆ ಹುಚ್ಚುಚ್ಚಾಗಿ ಯೋಚಿಸಿ... ನೀನಂತೂ ಚಿಂತೆಯಲ್ಲಿ ಸೊರಗಿ ಹೋಗಿದ್ದೆ... ಬೆಳಗಿನಿಂದ ನಿನ್ನ ತಲೆ ಡೆಸ್ಕಿಗೆ ಒರಗಿದ್ದು ಯಾಕೆಂದು, ನಂಗ್ ಗೊತ್ತಾಗಿದ್ದೆ ಆಗ. ಇನ್ನೇನು ನಿನ್ನ ತಲುಪಿ ಮಾತಾಡಿಸುವ ಕ್ಷಣಕ್ಕೆ ನೀನು ನಿನಗೆ ಗೊತ್ತಿಲ್ಲದೆ, ನಿನ್ನ ಇನಿಯ ನಿನ್ನ ಬಳಿ ಬರುತ್ತಿದ್ದುದನ್ನು ಗಮನಿಸದೆ ಹೊರನಡೆದೆ. ಚಿಂತಾಕ್ರಾಂತಳಾಗಿ, ಏನು ಮಾಡಬೇಕೆಂದು ಗೊತ್ತಾಗದೇ.. ಅತ್ಯಂತ ಭಾರದ ಹೆಜ್ಜೆ ಹಾಕುತ್ತಾ ಬಸ್ ಸ್ಟಾಪಿನ ಪಕ್ಕದ ಪಾರ್ಕಿನ ಕಡೆ ನಡೆದೆ. ಉದ್ಯಾನದಲ್ಲಿ ಕುಳಿತು ವರ್ಷವಿಡೀ ಗೀಚಿದ ಸಾಲುಗಳನ್ನು ನೋಡುತ್ತಾ ಕಣ್ಣೀರಲ್ಲಿ ಕೈತೊಳೆಯುವಾಗ ದಿಢೀರನೆ ಬಿರುಗಾಳಿಯೊಂದು ಬೀಸಿತು. ನೋಡನೋಡುತ್ತಲೇ ಆ ರಭಸದ ಮಾರುತ, ನಿನ್ನ ಕೈಯಲ್ಲಿದ್ದ ಪತ್ರಗಳನ್ನು ಕಸಿದು ನನ್ನ ಹತ್ತಿರ ತಂದೆಸೆಯಿತು. ಅದರಲ್ಲಿ ಮೂಡಿದ್ದ ನಿಷ್ಕಲ್ಮಶ ಪ್ರೇಮಕಾವ್ಯವನ್ನು ತಿಳಿಯಲು ಸಹಕಾರಿಯಾಯಿತು..
ಇದು ವೃತ್ತಾಂತ...! 


ಅದ್ಯಾಕೋ ಕಾಣೆ! 
ನಮ್ಮಿಬ್ಬರಿಗೂ, ಒಬ್ಬರಿಗೊಬ್ಬರು ಪರಸ್ಪರ ಭೇಟಿಯಾಗಿ ಗಂಟೆಗಟ್ಟಲೆ ಮಾತಾಡಬೇಕೆಂಬ ಯಾವ ಪ್ರಮೇಯ ಕೂಡ ಇರಲಿಲ್ಲ.. ಹಾಗಂತ ನಮ್ಮ ಸಂಭಾಷಣೆಗೆ ಅಡ್ಡಿ ಆತಂಕಗಳು ಏನು ಇರ್ಲಿಲ್ಲ.. ಅವಳೇ ಮೊದಲು ಮಾತಾಡಿಸಲಿ ಅಥವಾ ಅವನೇ ಮೊದಲು ಹೇಳಲಿ ಎಂಬ ಹುಚ್ಚು ಅಭಿಮಾನ ಕೂಡ ಇಬ್ಬರಿಗೂ ಇರಲಿಲ್ಲ.. ಆದಾಗ್ಯೂ ನಮ್ಮ ನಮ್ಮ ಭಾವನೆಗಳು ಮಾತಿನ ಮೂಲಕ ಸಂಧಿಸಿರಲಿಲ್ಲ... ಇದಕ್ಕೆ ಕಾರಣ ಇಂದಿಗೂ ಅಸ್ಪಷ್ಟ...!

★ ★ ★ ★ ★ ★ ★ ★ ★ ★ ★ ★ ★ ★ ★ ★ 

ಆ ಕ್ಷಣಕ್ಕೆ, ಎಲ್ಲ ಅಸ್ಪಷ್ಟಗಳೂ ಮಾಯವಾಗಿದ್ದವು. ನನ್ನ ಬದುಕಿನ ಸ್ಪಷ್ಟತೆ ನನ್ನೆದುರಲ್ಲೇ ನಿಂತಿತ್ತು. ನಿಧಾನವಾಗಿ ಹೆಜ್ಜೆಯನ್ನಿಡುತ್ತಾ ನನ್ನೆಡೆಗೆ ಬರುತ್ತಿತ್ತು. 

ಕೇವಲ ಪತ್ರಗಳ ಹುಡುವಿಕೆಯಲ್ಲಿ ಮೈಮರೆತ್ತಿದ್ದ ನಿನ್ನ ದೃಷ್ಟಿ, ಅಕಾಸ್ಮಾತ್ತಾಗಿ ಅವುಗಳನ್ನು ಹಿಡಿದು ನಿನ್ನ ಮುಂದೆಯೇ ನಿಂತಿದ್ದ ನನ್ನ ಮೇಲೆ ಬಿತ್ತು. ನಿನ್ನ ಹೆಜ್ಜೆಸದ್ದು ನಿಷ್ಶಬ್ಧತೆಯನ್ನು ತೋರಿತು. ಮೂಖಸ್ತಬ್ಧ ಮೂರುತಿಯಂತೆ, ನೀನಂತೂ ಒಂದ್ ಕ್ಷಣ ನಿಂತಲ್ಲಿಯೇ ಮೌನವಾಗಿ ನಿಂತುಬಿಟ್ಟೆ..!


                  ( ಚಿತ್ರಕೃಪೆ : ಅಂತರ್ಜಾಲ)

.
ಅತ್ತು- ಅತ್ತು, ನಾಳಿನ ಚಿಂತೆಯಲ್ಲಿ, ಮನಸ್ಸಿನ ನೂರಾರು ತೊಳಲಾಟಗಳಲ್ಲಿ, ನಿನ್ನ ನಯನಗಳು ನಲುಗಿ ಹೋಗಿದ್ದವು. ಸುಮಾರು ಎರಡು ವರ್ಷಗಳ ಕಾಲ ಒಂದ್ ಮಾತೂ ಇಲ್ದೆ, ಸಂಭಾಷಣೆ ಇಲ್ದೆ.. ಕೇವಲ ಕಣ್ಣಿನ ಭಾಷೆಯಲ್ಲಿಯೇ ಪ್ರೀತಿಯೆಂಬ ಹೂವನ್ನು ಅರಳಿಸಿದ್ದ ನಿನ್ನ ಕಣ್ಣುಗಳು ಬೆವೆತ್ತಿದ್ದರೂ, ಸೋತಿರಲಿಲ್ಲ..! ಆ ಜಯದ ಸನಿಹದಲ್ಲೇ ನೀ ಬಂದು ನಿಂತಿದ್ದೆ. ಗೊತ್ತಿಲ್ಲದೆ ನೀನು ಮತ್ತಷ್ಟು ಬಳಿಬಂದು ನಿಂತೆ. ನಿನ್ನ ಕೈಗಳಿಗೆ ನನ್ನ ಅನುಮತಿ ಬೇಕಿರಲಿಲ್ಲ. ನನ್ನನ್ನು ಗಟ್ಟಿಯಾಗಿ ತಬ್ಬಿ ಹಿಡಿದು, ಎದೆಯ ಮೇಲೆ ಮುಖವಿಟ್ಟು ದುಃಖಮಾಡಿ ಅಳಲಾರಂಭಿಸಿದೆ. ಇಷ್ಟು ದಿನ ನನ್ನ ಎದೆಯಲ್ಲಿ ಉಕ್ಕುತ್ತಿದ್ದ ವಿರಹಾಗ್ನಿಯು; ನಿನ್ನ ಕಂಬನಿಯ ಸ್ಪರ್ಶದಿಂದ ತಣ್ಣಗಾಯಿತು.

 ಹೃದಯ ತಂಪಾಯ್ತು! 

'ಪ್ರೇಮನಾದ' ಗಾಂಭೀರ್ಯದಿಂದ ನುಡಿಯಲಾರಂಭಿಸಿತು...!~ ಎಂ ಕೆ ಹರಕೆ

ಸೋಮವಾರ, ಸೆಪ್ಟೆಂಬರ್ 6, 2021

📖 ಹೃದಯದಿ ನಮಿಸುವೆ ಓ ಗುರುವೇ...📖


ಜೀವದ ಗುರುವೇ 

ಭಾವದ ಗುರುವೇ

ಹೃದಯದಿ ನಮಿಸುವೆ ಓ ಗುರುವೇ...

ಬಳಪದ ಬೆಳಕಲಿ

ಕತ್ತಲ ಓಡಿಸಿ

ಅಕ್ಷರ ಕಲಿಸಿದೆ ನಮಗೆ!..ಆಹಾ  

||ಪಲ್ಲವಿ||
ನೇಗಿಲಯೋಗಿಯು ಹಾಡಿದ ಹಾಗೆ

ಅಜ್ಜಿಯ ಜಂಭವು ಕರಗಿದ ಹಾಗೆ

ಗಲಿವರ ಕತೆಯ ಕೇಳುತಲಿರಲು;

 ಅಚ್ಚರಿ ಲೋಕವು ಅರಳಿದ ಹಾಗೆ!

ಕನ್ನಡ ಕಲಿಯಲು ಸಕ್ಕರೆಯಂತೆ

ಅಕ್ಷರ ಬರೆಯಲು ಮುತ್ತುಗಳಂತೆ

ಬಾಲ್ಯದ ನೀತಿಯ ಪಾಠಗಳೆಲ್ಲವೂ

ಗುರುಗಳು ನೀಡಿದ ವರವೋ.... ಆಹಾ

||ಪಲ್ಲವಿ||


ಶಾಲೆಯ ಪರಿಸರ ನೋಡಲು ಚೆಂದ

ಹೊರಗಿನ ಅಂಗಳ ಮನಸ್ಸಿಗೆ ಅಂದ

ಗೆಳೆಯರ ಜೊತೆಯಲಿ ಆಡುತಲಿದ್ದರೆ 

ಹೇಳಲು ಆಗದ ಪರಮಾನಂದ!

ಹೋಮ್ ವರ್ಕ್ ಬರೆಯದೇ ಆಡಿದ ಆಟ

ಟೀಚರ್ ಕಲಿಸಲು ಸುಂದರ ಪಾಠ

ಬಾಲ್ಯದ ಗುರುಗಳ ಮಾತುಗಳೆಲ್ಲವೂ

ಬದುಕಿಗೆ ನೀಡಿದ ಗುರಿಯೋ... ಆಹಾ!!

||ಪಲ್ಲವಿ||~ ಎಂ. ಕೆ. ಹರಕೆಭಾನುವಾರ, ಆಗಸ್ಟ್ 15, 2021

ನಶಾ ಪ್ರಪಂಚ

                  ( ಚಿತ್ರಕೃಪೆ: ಅಂತರ್ಜಾಲ )


ಅಬ್ಬಬ್ಬಾ 

ಏನ್ ಆ ಗುಂಡು ಆ ತುಂಡು!

ತುಂಡುಡಿಗೆಯ ಮಿರಿಮಿರಿ ನರ್ತನ!

ನಶೆಯ ಲೋಕವೋ ಅಥವಾ 

ಲೋಕದಲ್ಲೆಲ್ಲೂ ಸಿಗದ ನಶಾ ತಾಣವೋ!!


ಇದು ಧ್ವನಿ ಪ್ರಪಂಚವೇ?

ಇಲ್ಲ ಇಲ್ಲ..

ಅರ್ಥವಾಗದ ಭಾಷೆಯ, 

ಗೊತ್ತು ಗುರಿಯಿಲ್ಲದೆ ಸಾಗುವ,

ಬಿಡುವಿಲ್ಲದೆ ಕುಣಿಯಲು ಯೋಗ್ಯ,

ಕರ್ಣಪಟಲ ಅದುರುವಂತ ಕರ್ಕಶ ಶಬ್ಧ!


ಇದು ನಾಟ್ಯ ಪ್ರಪಂಚವೇ?

ಇಲ್ಲ ಇಲ್ಲ...

ಕೆಲವೊಮ್ಮೆ ತಾಳಕ್ಕೆ ತಕ್ಕ ಹೆಜ್ಜೆ,

ಒಮ್ಮಿಂದೊಮ್ಮೆಲೇ ಎಣೆಯಿಲ್ಲದ ಕುಣಿತ,

ಮತ್ತೊಮ್ಮೆ ನೀರಸ ಮೌನ..

ಮಗದೊಮ್ಮೆ ಒಂದಡಿ ಭೂಮಿಯೇ 

ಕೆಳ ಕುಸಿಯುವಂತ ದಾಂಡಿಗ ಹೆಜ್ಜೆಗಳು!!


ಇದು ಹುಚ್ಚರ ಪ್ರಪಂಚವೇ?

ಇಲ್ಲ ಇಲ್ಲ...

ಇಲ್ಲಿ ಬಂದವರು ದೊಡ್ಡ ದೊಡ್ಡ ಮಂದಿ

ಕೆಲವರು ಜನಪ್ರತಿನಿಧಿಗಳು,ಆರಕ್ಷಕರು..

ಇನ್ನೂ ಕೆಲವರು ಬಿಜಿನೆಸ್ ಭಯೋತ್ಪಾದಕರು,

ಒಂದಿಷ್ಟು ಮಂದಿ ದುಡ್ಡಿನ ಅಹಮ್ಮಿಗಳು

ಬಹಳಷ್ಟು ಮಂದಿ ವಿದ್ಯಾವಂತರೆ! 


ಇದು ಆನಂದ ಪ್ರಪಂಚವೇ?

ಇಲ್ಲ ಇಲ್ಲ...

ಜೊಲ್ಲು ಸುರಿಯುತ್ತಿದ್ದರೂ ಉಪ್ಪಿನಕಾಯಿ ನೆಕ್ಕುವ,

ಅರೆಪ್ರಜ್ಞನಾದರೂ ಮೇಲಿಷ್ಟು ಪರಮಾತ್ಮನ ಇಳಿಸುವ,

ಇಬ್ಬರು ಭುಜವನ್ನು ಹಿಡಿದು ನಡೆಸಿದರೂ ನಡೆಯಲಾಗದ,

ತಿಂದಿದೆಲ್ಲವನ್ನೂ ಕಾರು ಹತ್ತುವ ಮುನ್ನವೇ ಕಕ್ಕಿ,

ಪೆಕ್ರನಂತೆ ನಗುವ ಇವರಿಗೆಲ್ಲಿಯದು ಆನಂದ?

ಇವರನ್ನು ಹೊತ್ತು ಮನೆಸಾಗಿಸುವವರಿಗೆ ಯಾವ ಕರ್ಮ?


ಮತ್ತೆಂತ ಪ್ರಪಂಚವಿದು?

ರಾತ್ರಿ ಎನ್ನದೆ, ಹಗಲೆನ್ನದೆ

ವಾರವಿಡೀ ಕಂಪ್ಯೂಟರಿನಂತೆ ಕೆಲ್ಸ ಮುಗಿಸಿ,

ಸರ್ವಿಸಿಗೆ ಕೊಟ್ಟ ವಾಹನ ತೊಳೆದಂತೆ

ಅಡಿಯಿಂದ ಮುಡಿವರೆಗೆ 

ದೇಹದ ಕಲ್ಮಶಗಳನ್ನು, ಕಹಿ-ಕಂಪನಗಳನ್ನು, 

ಒಟ್ಟಾರೆ

ವಾರದ ಪೂರ್ತಿ ಒತ್ತಡವನ್ನು ತೊಳೆಯುವ ತಂತ್ರ!


ನೀವು ಉಡುವ, ತೊಡುವ,

ಉಣ್ಣುವ, ಕಕ್ಕುವ ಹಣವೆಲ್ಲ ನಿಮ್ಮ ದುಡಿಮೆಯದೆ!

ಆದರೆ,

ನಿಮ್ಮಿಂದ ಪೋಲಾಗುವ

ಗುಣಮಟ್ಟದ ಆಹಾರ, 

ಎಗ್ಗಿಲ್ಲದೆ ಉರಿಸಿದ ಇಂಧನ,

ಗುಂಗಿನಲ್ಲಿ ಒದರಿಸಿದ ಕರ್ಕಶ ಶಬ್ಧ ಇತ್ಯಾದಿ ನಿಮ್ಮದೇ??


ನಿಮ್ಮ ನಶಾ ಪ್ರಪಂಚ

ದುಡಿಯುವ ವರ್ಗ ಬೆವರಿಳಿಸಿ ಉತ್ಪಾದಿಸಿದನ್ನು

ಕ್ಷಣ ಮಾತ್ರದಲ್ಲೇ ಇಲ್ಲವಾಗಿಸುವ ನಾಶ ಪ್ರಪಂಚ!!

ನೀವು ಒಂದು ರಾತ್ರಿಯಲ್ಲಿ

ಬಳಸುವ ಸಂಪನ್ಮೂಲ,

ಬೇಕಾಬಿಟ್ಟಿ ವ್ಯಯಿಸಿದ ಖರ್ಚಿನಲ್ಲಿ 

ಕೂಳಿಲ್ಲದೆ, ಸೂರಿಲ್ಲದೆ ಕೊರಗುವ

ಒಂದು ಬಡ ಹಳ್ಳಿಯನ್ನು ಉದ್ಧರಿಸಬಹುದಿತ್ತು!!


~ಎಂ.ಕೆ.ಹರಕೆ


ಭಾನುವಾರ, ಏಪ್ರಿಲ್ 11, 2021

ಆರೋಗ್ಯವೇ ಮಹಾಭಾಗ್ಯ

ನಿನ್ನಿಂದಲೇ ನಿನ್ನಿಂದಲೇ ನಿನ್ನ ಹೆಲ್ತು ಹಾಳಾಗಿದೆ
ನಿನ್ನಿಂದಲೇ ನಿನ್ನಿಂದಲೇ ನಿನ್ನ ಬಾಳು ಮಿತವಾಗಿದೆ


ನಿನ್ನ ಬಾಡಿಲೀ ಬೊಜ್ಜೀಗ ಮನೆಮಾಡಿದೆ
ಈ ಆನ್ಲೈನ್ ಗೇಮಿಂಗ್ ಬಂದಾಗಲೇ
ಈ ಬದುಕಲ್ಲಿ ಸಿಹಿಯೆಲ್ಲ ಮರೆಯಾಗಿದೆ
ನಿನ್ನೆದುರಲ್ಲಿ ಮಧುಮೇಹ ನಿಂತಾಗಲೇ ||೧||

ನಿನ್ನಿಂದಲೇ ನಿನ್ನಿಂದಲೇ ನಿನ್ನ ಹೆಲ್ತು ಹಾಳಾಗಿದೆ
ಅದರಿಂದಲೇ ಅದರಿಂದಲೇ ನಿನ್ನ ವೆಲ್ತು ಹೋಗ್ತಾ ಇದೆ 


                   ( ಚಿತ್ರಕೃಪೆ : ಅಂತರ್ಜಾಲ )


ಬಾಯ್ ರುಚಿಗೆ ಅತಿಯಾಗಿ ಉಪ್ಪನು ತಿಂದು
ಬಿ.ಪಿಗೆ ಬಲಿಯಾದೆ ಸುಖವೇನು?
ರೋಡ್ ಸೈಡ್ ಪಾನಿಪುರಿ, ಫ್ರೈಡ್ ರೈಸ್ ನುಂಗಿ
ಮನೆಯೂಟ ಮರೆತೋದೆ ಸರಿಯೇನು?
ಈ ಫುಡ್ಡಿಗೆ ಒಣ ಬ್ರೆಡ್ಡಿಗೆ ನಿನ್ನ ಬಾಡಿ ಬೆಂಡಾಗಿದೆ
ನಿನ್ನಿಂದಲೇ ಇದರಿಂದಲೇ ನಿನ್ನ ಹೆಲ್ತು ಹದಗೆಟ್ಟಿದೆ||೨!!


ಹೋದಲ್ಲಿ ಬಂದಲ್ಲಿ ಫಿಜ್ಜಾ ಬರ್ಗರ್ 
ಸಾಲ್ದಕ್ಕೆ ಬಾಯ್ತುಂಬ ಕೂಲ್ಡ್ರಿಂಕ್ಸು !
ಪಾರ್ಟಿಯ ಹೆಸರಲ್ಲಿ ಬಾಡು-ಬ್ರಾಂಡಿ
ನಶೆಯಲ್ಲಿ ಸಿಗರೇಟು ಭಲೇಜೋಡಿ!
ಯಮರಾಯಗೆ ಸದ್ದಿಲ್ಲದೆ ನಿನ್ನ ಮೇಲೆ ಮನಸಾಗಿದೆ
ನಿನ್ನಿಂದಲೇ ನಿನ್ನಿಂದಲೇ ನಿನ್ನ ಹಾರ್ಟು ಫೇಲಾಗಿದೆ !!೩!!


ಈ ಮನಸ್ಸಿಂದು ಪ್ರತಿಕ್ಷಣವೂ ಭಯದಲ್ಲಿದೆ 
ನಿನ್ನೆದುರಲ್ಲಿ  ವೈರಾಣು ಬಂದಾಗಲೇ!
ನಿನ್ನ ತುಟಿಯಲ್ಲಿ ನಗು ಕೊಂಚ ಕಿರಿದಾಗಿದೆ
ಆ ನಗು ಕೂಡ ಈಗೀಗ ಮರೆಯಾಗಿದೆ!!

ನಿನ್ನಿಂದಲೇ ನಿನ್ನಿಂದಲೇ ನಿನ್ ಲೈಫು ಟೈಟಾಗಿದೆ
ನಿನ್ನಿಂದಲೇ ನಿನ್ನಿಂದಲೇ ಹೊಸ ಬಾಳು ಬೇಕಾಗಿದೆ!!

- ಎಂ ಕೆ ಹರಕೆ( 'ಮಿಲನ' ಚಿತ್ರದ ನಿನ್ನಿಂದಲೇ ಗೀತೆಯ ಧಾಟಿಯಲ್ಲಿ, ವಿಶ್ವ ಆರೋಗ್ಯ ದಿನದ ಅಂಗವಾಗಿ ಬರೆದ ಗೀತೆ.. ಅದೇ ಸ್ವರಸಂಗೀತದಲ್ಲಿ ಹಾಡಿಕೊಂಡರೆ ಸಾಹಿತ್ಯಕ್ಕೆ ಮೆರುಗು! )

ಭಾನುವಾರ, ನವೆಂಬರ್ 22, 2020

'ವೈಷ್ಣವ ಜನತೋ' ಕನ್ನಡ ಅನುವಾದ

ಸರ್ವರ ಕಷ್ಟವ ಅರಿತು ನೀ ನಡೆದರೆ
(ಎಲ್ಲರ ಬೇವಿಗೆ ಬೆಲ್ಲ ನೀನಾದರೆ)
ಕಲ್ಲಿನ ದೇವನೂ ಕರಗುವನು!
ಉಪಕಾರದ ಅಭಿಮಾನವ ಮರೆತರೆ
ಪುಣ್ಯದ ಹೊಳೆಯನು ಹರಿಸುವನು!!

ಲೋಕದಿ ಸಕಲರೂ ಬಂಧುಗಳಂತೆ
ನಿಂದಿಸದಿರು ನೀ ಯಾರನ್ನೂ
ನಡೆ-ನುಡಿಯಲ್ಲಿ ಮಡಿವಂತನಾದರೆ
ತಾಯಿಗೆ ಸಿರಿತನ ಬೇಕೇನು?

ಸಮದೃಷ್ಟಿಯಲ್ಲಿ ಸರ್ವರೂ ನಿಲ್ಲಲಿ
ಪರಸ್ತ್ರೀ ಎಂದಿಗೂ ನಿನ್ನ ತಾಯಿ!
ನಾಲಗೆಯಿಂದ ಅಸತ್ಯವ ನುಡಿದು 
ನೀ ಪರಸ್ವತ್ತಿಗೆ ಕೈ ಹಾಕದಿರು!!

'ಮೋಹ' ಎಂಬ ಮಾಯೆಗೆ ಬೀಳದೆ
ದೃಢವೈರಾಗ್ಯ ಇರಿಸು ಮನದೊಳಗೆ!
ರಾಮನಾಮ ಕೇಳಿ ಪುಳಕಿತ ನೀನಾದೊಡೆ 
ಸಕಲ ತೀರ್ಥಂಗಳೂ ಎದೆಯೊಳಗೆ!!

ಜಿಪುಣಿಯಾಗದೆ ದುರಾಸೆಯ ಬಿಡುನೀ
ಕೋಪದ ಬಾವಿಗೆ ಬೀಳದಿರು!
ಕವಿ ನಿನ್ನಾ ರೂಪವ ಕಾಣಲು ಕಾಯ್ವನು
ಪುಣ್ಯದ ಪ್ರಾಪ್ತಿ ಅಂದು ಜಗಕ್ಕೆಲ್ಲಾ!!~ ಗುಜರಾತಿ ಆದಿಕವಿ ನರಸಿಂಹ ಮೆಹ್ತಾ
 
(ಕನ್ನಡ ಭಾವಾನುವಾದ : ಮಾಳಿಂಗರಾಯ ಹರಕೆ)

ಶನಿವಾರ, ನವೆಂಬರ್ 21, 2020

NCC ಮತ್ತು ನಾನು!

2016ರ, ಆಗಸ್ಟ್ ಮಾಹೆಯ ಹೊತ್ತು. ಪ್ರಥಮ ವರ್ಷದ ನಮಗೆ, ಓರಿಯೆಂಟೇಶನ್ ಪ್ರೋಗ್ರಾಂ! ನನಗಿಲ್ಲಿ ವಿಶೇಷವಾಗಿ ಕಂಡದ್ದು ಖಾಕಿ ಸಮವಸ್ತ್ರ ಧರಿಸಿ ಶಿಸ್ತಾಗಿ ಕಾರ್ಯಕ್ರಮ ಅಚ್ಚುಗೊಳಿಸುತ್ತಿದ್ದ ಎನ್.ಸಿ.ಸಿ ಕೆಡೆಟ್ಸ್. ಅದೇ ಕ್ಷಣದಲ್ಲೇ ನಾನೂ ಈ ಸಮವಸ್ತ್ರ ಧರಿಸಿಯೇ ತೀರಬೇಕೆಂದು ನಿಶ್ಚಯಿಸಿ, ಅವರು ನಡೆಸುವ ದೇಹಧಾರ್ಢ್ಯತಾ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು NCC ಕ್ಯಾಪ್ ಧಕ್ಕಿಸಿಕೊಂಡದ್ದು ಇನ್ನೂ ಕಣ್ಣಂಚಿನಲ್ಲಿ ಉಳಿದಿರುವ ದೃಶ್ಯ.
.
.
 ಪ್ರತಿ ವಾರದಂಚಿನಲ್ಲಿ ಕ್ಲಾಸು, ಲ್ಯಾಬು ಎಲ್ಲವನ್ನೂ ಮುಗಿಸಿ ಕ್ಷಣಾರ್ಧದಲ್ಲಿ ಸಮವಸ್ತ್ರ ಧರಿಸಿ, ಬೂಟುಗಳನ್ನು ಸಿಕ್ಕಿಸಿಕೊಂಡು ಗ್ರೌಂಡಿನಲ್ಲಿ ಫಾಲ್-ಇನ್ ಆಗುವುದರೊಳಗೆ ಹೆಣಬಿದ್ದಂತಾಗುತ್ತಿತ್ತು. ಅದರ ನಡುನಡುವೆ ಶೂ ಫಾಲಿಶ್ ಇಲ್ಲದೆ, ಖಾಕಿ ಇಸ್ತ್ರಿ ಮಾಡದೆ, ಗಲಿಬಿಲಿಯೊಳಗೆ ಏನಾದರೂ ಮರೆತು ಧರಿಸದೇ ಬಂದಿದ್ದರೆ ಮುಗೀತು ನಮ್ಮ ಕಥೆ!! ಶನಿವಾರದ ಮಧ್ಯಾಹ್ನ ಊಟ ಮುಗಿದ ಕೂಡಲೇ (ನನ್ನ ಇತರ ಸ್ನೇಹಿತರು ಕಾಲೇಜಿನಲ್ಲಿ ಜಾಲಿಯಾಗಿ ಹಲ್ಲುಗಿಂಜುತ್ತಾ ಸುತ್ತುತ್ತಿರುವಾಗ) ಇಡೀ ಕಾಲೇಜನ್ನು ಅವರೆದುರು ಐದು ಸುತ್ತು ಓಡುವ ಗೀಳು, ತದನಂತರ ವ್ಯಾಯಾಮ, ಮುಗಿದೊಡನೆ ಶುರು ನೋಡಿ 'ಪರೇಡ್' ಎಂಬ ಹಬ್ಬ. ಶಿಸ್ತಿನ ಸಾಲಿನಲ್ಲಿ ನಿಂತು, ಉರಿ ಬಿಸಿಲಿನ ಧೂಳು ಹಿಂಸೆಯಲ್ಲಿ ಸೀನಿಯರ್ ನೀಡುವ ಕಮಾಂಡಿಗೆ ತಕ್ಕಂತೆ, ತಪ್ಪಿಲ್ಲದೆ ಕೈಬೀಸುವುದರಲ್ಲಿ ಏನೋ ಸಾಹಸ, ತೃಪ್ತಿ! ಈ ಸಾಹಸದಲ್ಲಿ ಹೆಣ್ಮಕ್ಕಳು ಬಿಡದೇ ನಮ್ಮೊಡನೆ ಸರಿಸಮಾನರಾಗಿ ಪಾಲ್ಗೊಳ್ಳುವ ಪರಿ ಆಶ್ಚರ್ಯಕರ ಹಾಗೂ ಶ್ಲಾಘನೀಯ..!
.
.
NCC ಎಂಬುದು ಕೇವಲ ಗ್ರೌಂಡಿನಲ್ಲಿ ಲೆಫ್ಟ್-ರೈಟ್ ಮಾಡಿ ಕೈತೊಳೆದುಕೊಳ್ಳುವ ಗುಂಪಲ್ಲ. ಕಾಲೇಜಿನ ಇತರ ಎಲ್ಲಾ ಕ್ಲಬ್ಗಳಿಗಿಂತ ಇದು ತೀರಾ ಭಿನ್ನ. ಇದು ministry of defense, GOVT of India ಇದರಡಿಯಲ್ಲಿ ಪಳಗುವ ಒಂದು ನಿರ್ದಿಷ್ಟ ಸಾಹಸಿ ಯುವ ಸಂಸ್ಥೆ. ಇದರ ಇನ್ನೊಂದು ಮುಖ ಹಲವರಿಗೆ ಪರಿಚಯವೇ ಇರುವುದಿಲ್ಲ.
ನಮ್ಮ ವರ್ಷಾಂತ್ಯದ ಪರೀಕ್ಷೆಗಳು ಮುಗಿದ ಬಳಿಕ (ಜುಲೈ-ಆಗಸ್ಟ್) ನಾವು ಕ್ಯಾಂಪ್ಗಳಿಗೆ ಹೋಗಿದ್ದಿದೆ. ನನ್ನ ಸ್ನೇಹಿತರೆಲ್ಲ ತಮ್ಮ-ತಮ್ಮ ಊರುಗಳಲ್ಲಿ ರಜೆಯೊಂದಿಗೆ ಮಜವಾಗಿದ್ದರೆ, ಪುನಃ ನಾವು ಒಂದೆಡೆ ಬೀಡು ಬಿಟ್ಟು ಬೆವರು ಹರಿಸಬೇಕಿತ್ತು. ನೆನಪಿರಲಿ, ಹೋಗುವಾಗ ಇರುವ ನಿಮ್ಮ ಮುಖ ಬಣ್ಣ ಬರುವಾಗ ಇರುವುದಿಲ್ಲ. ಆದರೆ ಕ್ಯಾಂಪ್ನಲ್ಲಿ ಭೇಟಿಯಾಗುವ ಬೇರೆ ಕಾಲೇಜಿನ ಸ್ನೇಹಿತರು, ಪರೇಡ್ ಕಲಿಸುವ ಡ್ರಿಲ್ ಮಾಸ್ತರ್, ಮೂಕವಿಸ್ಮಿತಗೊಳಿಸುವ ಮೇಜರ್-ಕರ್ನಲ್ ಸಾಹೇಬರು, ಮನಸ್ಸಿಗೆ ಮುದ ನೀಡುವ ಆಟೋಟ ಸ್ಪರ್ಧೆ ಪ್ರತಿಯೊಂದೂ ನಮ್ಮಲ್ಲಿ ವಿಶೇಷ ತೆರನ ಅನುಭವ ಹುಟ್ಟು ಹಾಕುತ್ತದೆ. ಪ್ರತಿನಿತ್ಯ ನಸುಕಿನಲ್ಲಿ ಏಳುವುದು, ಬಿಡುವಿಲ್ಲದ ಡ್ರಿಲ್, ಮ್ಯಾರಥಾನ್, ವ್ಯಾಯಾಮ, ವೆಪನ್ ಟ್ರೈನಿಂಗ್, ಮ್ಯಾಪ್ ರೀಡಿಂಗ್, ಬ್ಯಾಂಡ್, ಟೆಂಟ್ ನಿರ್ಮಿಸುವಿಕೆ, ಮಿಲಿಟರಿ ಹಿಸ್ಟರಿ, ಮಧ್ಯಾಹ್ನದ ಪಿ-ಟಿ ಈ ಎಲ್ಲವೂದರ ಜತೆಗೆ ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ದಿನವಿಡೀ ನಾವು ಸುಸ್ತಾಗಿದನ್ನು ಮರೆಸುವಂತಿರುತ್ತಿತ್ತು. ಹೀಗೆ ಹತ್ತು ದಿನ ಕಳೆದದ್ದೇ ಗೊತ್ತಾಗುತ್ತಿರಲಿಲ್ಲ. ಇದರ ಮಧ್ಯೆ ಚಿತ್ತಾಕರ್ಷಕ ಚಹರೆಯಿಂದ ಓಡಾಡುವ ಲಲನೆಯರ ಮೊಗಸೌಂದರ್ಯ ನಿಮ್ಮನ್ನು ಆಕರ್ಷಿಸದೆ ಇರಲಾರದು!!
ಟ್ರೆಕ್ಕಿಂಗ್ ಕ್ಯಾಂಪ್ಗಳೂ ಸಹ ನಮ್ಮ ಪಯಣದ ಒಂದು ಭಾಗ. ಕಾಲೇಜಿನ ಸಹಯೋಗದಲ್ಲಿ ನಮ್ಮ ತಂಡ ಮೊದಲ ವರ್ಷ ನಂದಿಬೆಟ್ಟ, ನಂತರದಲ್ಲಿ 'ಕುದುರೆಮುಖ' ಹಾಗೂ ಶಿವಮೊಗ್ಗದ ಸುತ್ತಲ ಪಶ್ಚಿಮ ಘಟ್ಟಗಳಲ್ಲಿ ದಣಿವರಿಯದೆ ಸುತ್ತಿ, ಸಾಗಿ ಸಂಭ್ರಮಿಸಿದ್ದು ಈಗ ನೆನಪು ಮಾತ್ರ.
.
.
                   ( ಚಿತ್ರಕೃಪೆ: ಅಂತರ್ಜಾಲ )


 ಸಾಧನೆ ಮಾಡಲು, ಸಾಧಿಸುವ ಮಾರ್ಗದಲ್ಲಿ ನಡೆಯಲು ಅನೇಕ ಅವಕಾಶಗಳನ್ನು ಎನ್.ಸಿ.ಸಿ ನಿಮಗೆ ತೆರೆದಿಡುತ್ತದೆ. ಬೇರೆಯವರು ನೋಡಿಯೂ ಇರದ ಶಸ್ತ್ರಗಳ ಪರಿಚಯ ನಿಮಗಾಗುತ್ತದೆ. ಸರಳ ರೈಫಲ್ಗಳಿಂದ ಕೆಲ ಗುಂಡುಗಳನ್ನೂ ಹಾರಿಸಲೂಬಹುದು. ಮಿಲಿಟರಿ ಬದುಕಿನ ಕೊಂಚ ಪ್ರಮಾಣದ ವಿಶಿಷ್ಟತೆ ನಮಗರಿವಾಗುತ್ತದೆ. ಹಲವಾರು ರಾಷ್ಟ್ರೀಯ ಮಟ್ಟದ ಕ್ಯಾಂಪ್ಗಳಲ್ಲಿ ಭಾಗವಹಿಸಬಹುದು. ವಿಶೇಷ ಅನುಭವಗಳನ್ನು ಸಂಪಾದಿಸಬಹುದು. ರಾಜ್-ಪಥ್ ನಲ್ಲಿ ನಡೆಯುವ RD ಪರೇಡ್ ಹಾಗೂ TSC ಕ್ಯಾಂಪ್ಗಳಿಗೆ ಆಯ್ಕೆ ಆಗಿ ಹೋಗಿ ಬಂದರಂತೂ ನಿಮ್ಮ ಅರ್ಧ ಜೀವನಕ್ಕಾಗುವಷ್ಟು (ಗೆಳೆಯರು-ನೆನಪುಗಳು) ನಿಮ್ಮನ್ನು ಬಂಧಿಸುತ್ತವೆ. ನಮ್ಮ BMSCE-NCCಯ ನನ್ನ ಮಿತ್ರರೂ ಈ ಹಂತಕ್ಕೆ ತಲುಪಿ ಸಾಧನೆಗೈದದ್ದು ನಮ್ಮೆಲ್ಲರ ಹೆಮ್ಮೆ. 
NCC ನನ್ನ ಇಂಜಿನಿಯರಿಂಗ್ ಬದುಕಿನ ಅವಿಭಾಜ್ಯ ಅಂಗ. ಸಹಸ್ರಾರು ಸಂಗತಿಗಳನ್ನು ಕಲಿಸಿದ ವೇದಿಕೆ. ಮನಮಿಡಿಯುವ ನೆನಪುಗಳ ಹೂಗುಚ್ಛ. ಈ ಸವಿ-ನೆನಪುಗಳ ಸರಮಾಲೆಯಲ್ಲಿ ಮಿಂದೆದ್ದು ಸಹಕರಿಸಿದ ನನ್ನೆಲ್ಲಾ ಸಹಪಾಠಿಗಳು, ಬೋಧಕ-ಭೋದಕೇತರ ವರ್ಗ, ವಿಶೇಷವಾಗಿ (ತಪ್ಪಿಸಿಕೊಂಡಿದ್ದ ಟೆಸ್ಟ್- ಕ್ವಿಜ್ಗಳನ್ನು ಪುನಃ ನಡೆಸಿಕೊಟ್ಟ) ಅಧ್ಯಾಪಕರಿಗೆ ನನ್ನ ಹೃದಯಸ್ಪರ್ಶಿ ಕೃತಜ್ಞತೆಗಳು!!
ಧನ್ಯವಾದ...

~ಎಂ. ಕೆ. ಹರಕೆ

ಗುರುವಾರ, ನವೆಂಬರ್ 12, 2020

'ಬಯಕೆ'


ಬರಿದಾದ ಬದುಕಲೂ 
ಭರಪೂರ ಭರವಸೆ ಬಿತ್ತಿ
'ಬಯಕೆ' ಬೇಯಿತು ಬಿಡದೆ ಬರಿಮಾತಿನಲ್ಲಿ!

ಬತ್ತಳಿಕೆಯ ಬಾಣ 
ಬಾರದು ಬಯಸಿದಾಗ
ಬವಣೆ ಭಾಗ್ಯವ ಬೆನ್ನಟ್ಟುವುದು ಬಹಳ
ಭಾರವಾಯಿತು ಬದುಕು 
ಬಾಗಿತು ಭವಿಷ್ಯದ ಬಳ್ಳಿ
ಬಿರುಸಿನ ಬಿರುಗಾಳಿಗೆ ಬೆಲೆತೆತ್ತಿತು!

              ( ಚಿತ್ರಕೃಪೆ: ಅಂತರ್ಜಾಲ )


ಬಂಧುಗಳ ಬೆನ್ನುಡಿ
ಬಿನ್ನಾಣದ ಬಿಡಿಗಾಸು
ಬಿರಿಯದೇ ಭಾವದ ಬಸಿರ ಬಂದೂಕಿನಲ್ಲಿ?
ಬಿಕ್ಕಟ್ಟಿನ ಬಿಂದಿಗೆಯಲ್ಲೇ
ಬಾಳಿನ ಬೇಗೆಯ ಬಿಗಿದು
ಬದುಕ ಬಿಂಬಿಸುವ ಭಾವವೇ ಬಲಿಯಾಗಿದೆ!

ಬೆಲ್ಲದ ಭಾಗ್ಯೋದಯಕೆ
ಬದಲಾದ ಬಯಲಾಟವು
ಬಳಲಿಸಿದೆ ಬಣ್ಣದ ಬಾಳ ಬಡಿದಾಡಿಸಿ
'ಬಯಕೆ'ಯನ್ನು ಬಿಟ್ಟು
ಬಿರುದಾವಳಿಗಳ ಬದಿಗೊತ್ತಿ
ಬಾಯ್ಮುಚ್ಚಿ ಬಿಡದೇ ಭಜಿಸು ಭಗವಂತನ!
ಬರೀ, ಭಯ ಭಕ್ತಿಯಲಿ ಭಜಿಸು ಬಯಲಾತ್ಮನ!


~ಎಂ.ಕೆ.ಹರಕೆ

ಭಾನುವಾರ, ನವೆಂಬರ್ 1, 2020

ನೂರು ಭಾಷೆ ಮೀರಿ ನಿಲ್ಲುವ ಭಾಷೆ ನನ್ನದು!

ನೂರು ಭಾಷೆ ಮೀರಿ ನಿಲ್ಲುವ
 ಭಾಷೆ ನನ್ನದು!
ಅಂತರಂಗ ಸೂರೆಗೊಳ್ಳುವ
ನುಡಿಯು ನನ್ನದು....|
ಹರಿವಾ ಕಾವೇರಿಯಲ್ಲಿ ಜಿಗಿದು
ಸ್ವರವಾಗಿ ಚಿಮ್ಮುವ|
ಜನರ ಉಸಿರಲ್ಲಿ ಬೆರೆತು
ಧಗಿಸಿ ದನಿಯಾಗಿ ಹೊಮ್ಮುವ....||

ಇತಿಹಾಸದ ಗತವೈಭವ
ನನ್ನ ಭಾಷೆಯ ಐಸಿರಿ|
ರನ್ನ-ಪೊನ್ನರು ಕವಿ ಪಂಪನೂ
ರಸಕಾವ್ಯದ ವೈಖರಿ...|
ಕುಮಾರವ್ಯಾಸನ ಭಾರತ
ಕರುನಾಡ ಕಾವ್ಯ ಚೆಲುವು|
ನಮ್ಮ ದಾಸ-ಶರಣ ನುಡಿಸಂಸ್ಕೃತಿ
ಈ ಭಾಷೆ ಕಂಡ ಗೆಲುವು.....|

                       【ಚಿತ್ರಕೃಪೆ: ಅಂತರ್ಜಾಲ】

ನೂರು ಭಾಷೆ ಮೀರಿ ನಿಲ್ಲುವ
ಭಾಷೆ ನನ್ನದು...!
ಅಂತರಂಗ ಸೂರೆಗೊಳ್ಳುವ
ನುಡಿಯು ನನ್ನದು!!

ಶಿಲೆಶಾಸನ ಕಲ್ಬಂಡೆಯೂ
ಈ ಭಾಷೆಗೆ ಮಂದಿರ|
ಗಡಿನಾಡಲೂ ಒಳನಾಡಲೂ
ನುಡಿಯಾಗಿದೆ ಸುಮಧುರ...|
ಕುವೆಂಪು ಬೇಂದ್ರೆ ಕವಿ ಶ್ರೇಷ್ಠರು
'ಜೈ' ಎಂದು ನುಡಿದ ಭಾಷೆ|
ಕರ್ಣಾಟ ಜನಮನ ಅನುಕ್ಷಣ
'ಕೈ' ಎತ್ತಿ ಮುಗಿವ ಭಾಷೆ....|

ಎಂದೂ ಎಂದೆಂದೂ ನುಡಿ
ಕನ್ನಡ ಸಿರಿಗನ್ನಡ....
ಬಾಳಲ್ಲಿ ಎಂದೆಂದೂ ನುಡಿ
ಕನ್ನಡ ಸಿರಿಗನ್ನಡ||

                        
   ~ಎಂ.ಕೆ.ಹರಕೆ


(ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಜೊತೆಜೊತೆಯಲಿ' ಧಾರಾವಾಹಿಯ ಶೀರ್ಷಿಕೆ ಗೀತೆಯ ಕವರ್ ಸಾಂಗ್ ಇದಾಗಿದ್ದು, ಅದೇ ಧಾಟಿಯಲ್ಲಿ ಹಾಡಿಕೊಂಡರೆ ಮತ್ತಷ್ಟು ಮೆರಗು ಸಾಹಿತ್ಯಕ್ಕೆ!)
ಬುಧವಾರ, ಜುಲೈ 8, 2020

ಬದುಕು ಬದಲಿಸಿದ ಬಾಲಕ!

ಉರಿ ಉರಿ ಬಿಸಿಲು, ಒಣಧೂಳು, ಬಂಡೆ ಸೀಳುವಂತ ಕರ್ಕಶ ಶಬ್ಧಕ್ಕೆ ಬೇಯುತ್ತಿರುವ ತ್ರಾಣವನ್ನು ಮುಖಕ್ಕಂಟಿದ್ದ ಮುಖಗವಸು ಮತ್ತಷ್ಟು ಪೀಡಿಸುತ್ತಿದ್ದ ದೃಶ್ಯ. ಇದರ ನಡುವೆ ಧೂಳಿನಿಂದಾವೃತವಾದ ಕಣ್ರೆಪ್ಪೆ, ಉಸುಕಿನಲ್ಲಿ ತೇಯ್ದ ತಲೆಕೂದಲು, ಆ ತಲೆಮೇಲೊಂದು ಸಿಂಬಿ, ಡೊಗಳು ಅಂಗಿ, ತುಂಡ ಪ್ಯಾಂಟೊಂದನ್ನು ಧರಿಸಿದ್ದ ಬಾಲಕ ಎದುರಾದ. ಕಲ್ಲೇಶನಿಗೆ ತಾನು ಕಂಡ ದೃಶ್ಯದಲ್ಲಿ ಈ ಬಾಲಕನ ಹರ್ಷ ಚಹರೆಯೊಂದೆ ಆಕರ್ಷಿತ, ಮತ್ತೆಲ್ಲವೂ ಗೌಣ. ಆ ಹುಡುಗನ ಸಾಮೀಪ್ಯ ಧಾವಿಸಿ ಕಲ್ಲ ಹೀಗಂದ-

'ಏನು ನಿನ್ನ ಹೆಸ್ರು?'

'ರಂಜನ್ ಅಂತಾರೆ ನನ್ನ, ನೀವು ಬೇಕಾದರೆ ರಂಜು ಅಂತಲೂ ಕರೀಬಹುದು!'

ಹುಡುಗನ ಪ್ರತ್ಯುತ್ತರ ಕೇಳಿ ಕಲ್ಲೇಶನಿಗೆ ಕಲ್ಲು ಬಡಿದಂತಾಯಿತು. ಆದರೂ ಬಾಲಕನ ಧೈರ್ಯೋಚಿತ ಮಾತುಗಳಿಗೆ ಮನಸ್ಸು ಶರಣಾಯಿತು. ಹುಡುಗನ ಬಗ್ಗೆ ಕುತೂಹಲ ಹೆಚ್ಚಿತು.
.
ತಿರುಗಿ ನೋಡಲು ಹುಡುಗ ಅಲ್ಲಿರಲಿಲ್ಲ. ಬುಟ್ಟಿಯಲ್ಲಿ ಉಸುಕು ಹೊತ್ತು ಮೇಸ್ತ್ರಿ ಇದ್ದಲ್ಲಿಗೆ ದೌಡಾಯಿಸಿದ್ದ.
ಕಲ್ಲೇಶ ಕರಗುವ ಮನಸ್ಸುಳ್ಳವನು, ಭಾವಜೀವಿ. ಓದೋವಯಸ್ಸಿನ ಪುಟ್ಟಬಾಲಕನೋರ್ವನ ಕಷ್ಟ-ಕಾರ್ಪಣ್ಯ ಕಂಡು ಮನದೊಳಗೆ ಬಿಕ್ಕಿದ. ಅಂದ ಹಾಗೆ, ಈದಿನ ಕಲ್ಲೇಶನೂ ಸಹ ಇಲ್ಲಿ ನಡೆಯುತ್ತಿದ್ದ ಕಟ್ಟಡ ಕಾಮಗಾರಿಗೆ ಕೂಲಿಕನಾಗಿ ಆಗಮಿಸಿದ್ದ. ಇನ್ನೂ ಓದುತ್ತಿರುವ ಹೈದ. ಬೆಂಗ್ಳುರಿನ ದೊಡ್ಡ ಕಾಲೇಜೊಂದರಲ್ಲಿ ಇಂಜಿನಿಯರಿಂಗ್ ಅಭ್ಯಸಿಸುತ್ತಿದ್ದ. ಡಿಗ್ರಿ ಕೈಸೇರುವ ಹೊತ್ತಲ್ಲಿ ಕೋವಿಡ್-19 ರ ಛಾಯೆ ಅಡ್ಡಲಾಗಿ ಎಲ್ಲವನ್ನೂ ಮುಂದೂಡಿತ್ತು. ಮನೆಯಲ್ಲಿದ್ದು ಎಂತ ಮಾಡುವುದೆಂದು, ತಾನು ಓದುತ್ತಿರುವ ವಿಷಯಕ್ಕನುಗುಣ ಏನಾದರೂ ಕಲಿತಂತಾಗುತ್ತದೆಂದು ಕಾಮಗಾರಿ ಸ್ಥಳಕ್ಕೆ ಕಾಲಿಟ್ಟಿದ್ದ. ಇವನಿಗೆ ಈ ಕೆಲ್ಸ ಹೊಸತಲ್ಲದಿದ್ದರೂ ತುಂಬಾ ದಿನಗಳ ವಿಶ್ರಮದ ಕಾರಣ ಜಡದೇಹಿಯಾಗಿದ್ದ. ಕೊಂಚ ದುಗುಡವೂ, ನಿರುತ್ಸಾಹವೂ ಮನದೊಳಗೆ ಮನೆಮಾಡಿದ್ದವು. ಈ ಬಾಲಕನ ಕಂಡಾಕ್ಷಣದಿಂದ ಒಂದಿಷ್ಟು ಉತ್ಸಾಹ ನೀರೊಡೆದು, ಕಾಯಕದ ಉಲ್ಲಾಸ ಕೈಬೀಸಿ ಕರೆಯುತ್ತಿತ್ತು.
.
ಮೇಸ್ತ್ರಿ ಪಕ್ಕದೂರಿನವ. ಯಜಮಾನನಿಂದ ಕೆಲಸ ಒಪ್ಪಿಕೊಂಡು ಕಾಂಪೌಂಡ್ ಕಟ್ಟುತ್ತಿದ್ದ ಕಾರಣಕ್ಕೆ ಎಲ್ಲ ಕೂಲಿಕರನ್ನು  'ಬಿರ್ ಬಿರ್ರನೆ ಬನ್ನಿ' ಎಂದು ಸದ್ದು ಮಾಡಿ ಕರೆಯುತ್ತಿರುತ್ತಿದ್ದ. ದಿನಗೂಲಿಗೂ, ಒಪ್ಪಿಕೊಂಡು ಮಾಡುವ ಕೆಲಸಕ್ಕೆ ವ್ಯತ್ಯಾಸವಿದೆ. 'ದಿನಗೂಲಿ'ಯೆಂದರೆ ಯಜಮಾನನು ಕಾರ್ಯಸ್ಥಾನದಲ್ಲಿ ನಿಂತು ಕೆಲಸ ಮಾಡಿಸಿ ಮೇಸ್ತ್ರಿ ಸೇರಿದಂತೆ ಎಲ್ಲ ಕೂಲಿಕಾರರಿಗೆ ದಿನಕ್ಕಿಂತಿಷ್ಟೆಂದು ನೀಡುವ ಹಣ. 'ಒಪ್ಪಿದ ಕೆಲಸ'ವೆಂದರೆ ಯಜಮಾನ ಇಷ್ಟು ಪ್ರಮಾಣದ ಕೆಲಸವನ್ನು ಮೇಸ್ತ್ರೀಗೆ ಒಪ್ಪಿಸಿ ಇಂತಿಷ್ಟು ಹಣವನ್ನು ಒಮ್ಮೆಲೇ ಮೇಸ್ತ್ರಿಯ ಕೈಗೊಪ್ಪಿಸುತ್ತಾನೆ. ಕಡಿಮೆ ದಿನಗಳಲ್ಲಿ ಕೆಲಸ ಮುಗಿದರೆ ಕೂಲಿಕರಿಗೆ ನೀಡುವ ತುಸು ಹಣ ಮಿಕ್ಕಿ, ಮೇಸ್ತ್ರಿ ಲಾಭಗಳಿಸುತ್ತಾನೆ. ಆದ್ದರಿಂದ ಯಾರಾದರೂ ಒಂದುಕ್ಷಣ ಸುಧಾರಿಸಿಕೊಳ್ಳುತ್ತ ನಿಂತಿದ್ದರೆ,
'ಅಲ್ಲಯ್ಯ, ಹಿಂಗ್ ನಿಂತ್ರೆ ಗೋಡೆ ಯಾವಾಗ್ ಏರ್ಸೋದು?' 
ಎಂದು ವ್ಯಂಗ್ಯವಾಡುತ್ತಿದ್ದ. ಅಂತೂ ಕೆಲಸ ಕಾಮಗಾರಿ ಸರಾಗವಾಗಿ ನಡೆಯುತ್ತಿತ್ತು.
.
ಬಂದ ಕಲ್ಲೇಶನಿಗೆ ಕಲ್ಲೆತ್ತುವ ಕೆಲಸ ನಿಗಧಿಯಾಯಿತು. ತನ್ನ ಹೆಸರಿಗೆ ಅನ್ವರ್ಥವಿರುವ ಕೆಲಸ ಕಂಡು ಮನಸ್ಸೊಳಗೆ ಮುಗುಳ್ನಕ್ಕ 'ಕಲ್ಲ'. ಸುಮಾರು 20 ಕೆಜಿ ತೂಗುವ ಬಂಡೆಗಲ್ಲುಗಳನ್ನು ಹುಮ್ಮಸ್ಸಿನಲ್ಲಿ ಎತ್ತಿ ತಂದು ಗೋಡೆ ಕಟ್ಟುವ ಜಾಗಕ್ಕೆ ತಂದೆಸೆಯತೊಡಗಿದ. ಹುಡುಗನ ವೀರಾವೇಶವನ್ನು ಕಂಡು ಅಲ್ಲಿದ್ದ ಹಿರಿಜೀವಗಳು ಒಳಗೊಳಗೆ ಹುಸಿನಗೆಯಿತ್ತರು. ಈ ನಗೆಯಿಂದ ಕಲ್ಲನ ಹುಮ್ಮಸ್ಸು ಕರಗಿ ಎಲ್ಲರಂತೆ ಸಾವಕಾಶದ ಕಾರ್ಯಕ್ಕೆ ಅಣಿಯಾದ. ಇದರಿಂದ ಅವನ ಒಣತ್ರಾಣವು ಕೊಂಚ ಉಸಿರಾಡುವಂತಾಯಿತು. ಸೂರ್ಯನ ರಶ್ಮಿ ನೆತ್ತಿಯನು ದಾಟಿ ಪಶ್ಚಿಮದ ಕಡೆಯಿಂದ ಒರೆಯಾಗಲಾರಂಭಿಸಿದವು. ಸಮಯ ಎರಡಾಯಿತು.
'ಊಟ ಮುಗಿಸಿ ಬನ್ನಿ ಬೇಗ, ಹೊರಡಿ' ಎಂದು ಆಜ್ಞೆಯಿತ್ತ ಟೋಪಿ ಧರಿಸಿದ್ದ, ಕೈಯಲ್ಲಿ ಕರಣಿಯಾಡಿಸುವ 'ಮೇಸ್ತ್ರಿ'.
.
ಬಿಡುವಿಲ್ಲದೆ ಕಲ್ಲು ಮಣ್ಣು ಹೊತ್ತು, ಹಸಿದು ಹೈರಾಣಾಗಿ ಕಂಗೆಟ್ಟಿದ್ದ ಕೂಲಿ ಮಾಡುವ ಜೀವಗಳಿಗೆ ಕೊಂಚ ವಿರಾಮ ದೊರೆಯಿತು. ಜೀವಕ್ಕೆ ಚೈತನ್ಯ ಸ್ಫುರಣವಾಯಿತು.ಕಲ್ಲ ಭಾರದ ನಡಿಗೆಯಲ್ಲಿ ಬಂದು, ಧೂಳಾಗಿದ್ದ ಕೈಕಾಲು ತೊಳೆದು ಕಟ್ಟಡದ ಪಕ್ಕದಲ್ಲಿಯೇ ಇದ್ದ ಮರದ ನೆರಳಿನಲ್ಲಿ ಊಟ ಮಾಡಲು ಬುತ್ತಿಯನ್ನು ಹರವಿದ. ಮತ್ತೆಲ್ಲರೂ ತಮ್ಮ-ತಮ್ಮ ಬುತ್ತಿಯನ್ನು ಬಿಚ್ಚಿ ಅದಾಗಲೇ ಪ್ರಸಾದ ಸವಿಯುತ್ತಿದ್ದರು. ತಾನೂ ಬುತ್ತಿ ಬಿಚ್ಚಿ ಅರ್ಧ ತಿನ್ನುತ್ತಲೇ ರಂಜು ಹಾಗೂ ಆತನ ತಂದೆತಾಯಿಯರು ಕೈಗೆಟಕುವ ದೂರದಲ್ಲೇ ಪಿಸುಗುಟ್ಟುತ್ತ ತಿನ್ನುತ್ತಿರುವುದನ್ನು ಕಂಡ. ಕಣ್ಣಿನ ಸನ್ನೆಯಿಂದಲೇ ಅರಿತು ರಂಜು, ಕಲ್ಲನ ಬಳಿ ಬಂದು 'ಊಟ ಮುಗಿಯಿತೇ ಅಣ್ಣಯ್ಯ?' ಎಂದ. 'ತಗೋ ಈ ಸಿಹಿಯನ್ನು, ಹ್ಞೂ ಈಗ ಮುಗೀತು ನೋಡು!' ಎಂದು ಬುಟ್ಟಿಯಂಚಿನಲ್ಲಿದ್ದ ಸಿಹಿಖಾದ್ಯವನ್ನು ಅವನ ಕರದಲ್ಲಿಟ್ಟ. ರಂಜು ಸಿಹಿಪ್ರಿಯ. ಕ್ಷಣಾರ್ಧದಲ್ಲಿ ತಿಂದು ತೇಗಿದ.
.
ಬುತ್ತಿ ಕಟ್ಟಿಟ್ಟು ಪಕ್ಕದಲ್ಲಿ ಹರಿಯುತ್ತಿದ್ದ ಪೈಪಿನ ನೀರಿನಲ್ಲಿ ಕೈತೊಳೆದ ಕಲ್ಲ ಮುಗುಳ್ನಗುತ್ತಾ ಹೀಗಂದನು.
'ಎಷ್ಟು ಮಂದಿ, ನಿಮ್ಮನೇಲಿ?'

'ನಾಲ್ವರು ನಾವು'

'ಯಾರ್ಯಾರಿದ್ದೀರಿ?'

'ನಾನು ನನ್ನ ತಂಗಿ, ಜತೆಗೆ ಅಪ್ಪ-ಅಮ್ಮ'

'ಓಹ್ ಚಿಕ್ಕ ಕುಟುಂಬ ಚೊಕ್ಕ ಕುಟುಂಬ'

'ಅದೆಂತ ಚೊಕ್ಕ? ನಾ ಓದಿ ದುಡಿದು ತಿರುವವರೆಗೂ,
ಚೊಕ್ಕದ ಮಾತೆಲ್ಲಿ!'

ತಕ್ಷಣ ಟೋಪಿವಾಲ ಮೇಸ್ತ್ರಿಯಿಂದ ಕಿರುಚಾಟ ಶುರುವಾಯಿತು. 'ಮಾಡ ಆಗಿದೆ, ಮಳೆ ಬರೋ ಹೊತ್ತು! ಬಿರ್ರನೆ ಕೆಲ್ಸ ಮುಗ್ಸದ್ರೆ ಮನೆ. ಬನ್ನಿ ಬೇಗಬೇಗ'..
.
ಆಜ್ಞೆ ಹೊರಬೀಳುತ್ತಲೇ ಹುಡುಗ ಮರುಮಾತಾಡದೆ ಅಲ್ಲಿಂದ ಕೆಲಸಕ್ಕೆ ಹಿಂತಿರುಗಿದ. ಕಲ್ಲನ ತಲೆಯಲ್ಲಿ ಇನ್ನೂ ಏನೋ ಓಡಾಡುತ್ತಿತ್ತು. ರಂಜು ಉಸುರಿದ ಮಾತುಗಳು, ಅವನಲ್ಲಿದ್ದ ಜವಾಬ್ದಾರಿತನ, ಕಷ್ಟಗಳನ್ನು ಹಿಮ್ಮೆಟ್ಟಿಸಿ ದುಡಿದು ಮಕ್ಕಳೀರ್ವರಿಗೆ ಶಿಕ್ಷಣವೀಯುತ್ತಿರುವ ಆತನ ಪೋಷಕರು ಎಲ್ಲವೂ ಕಣ್ಣಿನಂಚಿನ ಪರದೆಯಲ್ಲಿ ಸಾಗಿ ಓಡಿದವು.
.
ಎಂತಹ ಜಾಣ್ಮೆ, ಆದರ್ಶಪ್ರಾಯ ಬದುಕು ಈತನದು. ಇವನ ತೇಜಸ್ಸನ್ನು ನೋಡಿದರೆ ಮುಂದೆ ಅಪ್ರತಿಮ ಸಾಧಕನಾಗುವುದರಲ್ಲಿ ಸಂಶಯವಿಲ್ಲಯೆಂದುಕೊಂಡ ಕಲ್ಲ. ಒಂದರ್ಥದಲ್ಲಿ 'ದುಡಿಮೆಯೇ ದೇವರು', 'ದುಡಿಮೆಯನ್ನೇ ನಂಬಿ ಬದುಕು' ಎಂಬ ಸಿದ್ಧಾಂತದಲ್ಲಿ ನಂಬಿಕಸ್ಥನೀತ. ಆದರೆ ಇತ್ತೀಚಿಗೆ ತುಸು ದೇಹ ದಣಿದರೆ ಸಂಕಟವಾದಂತೆ ಅನ್ನಿಸುತ್ತಿರಬೇಕು. ಅವ್ವ-ಅಪ್ಪ ಏನಾದ್ರೂ ಸಣ್ಣ ಕೆಲಸ ಹೇಳಿದರೂ ಸಿಡಿಮಿಡಿಗೊಳ್ಳುತ್ತಿದ್ದ. ರಂಜುವಿನ ಕಾರ್ಯ ನೋಡಿ ಈತನಿಗೂ ಅರಿವಾಗಿರಬೇಕು; 'ಜಡದೇಹ ವ್ಯರ್ಥಕಾಯವೆಂದು!'
.
ಕಲ್ಲನು ಯೋಚನಾಲಹರಿಯಿಂದ ಹೊರಬರಲು, ಮೇಸ್ತ್ರಿ ಮತ್ತೊಮ್ಮೆ ಅಬ್ಬರಿಸಿ ಕರೆಯಬೇಕಾಯಿತು. ಈ ಸರತಿಯ ಕೂಗು 'ಲೌಡ್ ಸ್ಪೀಕರ್'ಗಳನ್ನು ಮೀರಿಸುವಂತಿತ್ತು. ಕರ್ಣಪಟಲಗಳನ್ನೇ ಗೋಳಿಟ್ಟ ಕರೆಗೆ, ಕಂಗಾಲಾದ ಕಲ್ಲ ಮತ್ತೆ ಕಲ್ಲೆತ್ತುವ ಕೆಲಸಕ್ಕೆ ಮುನ್ನಡೆದ.
.
ಕೆಲಸದಲ್ಲಿನ ತಲ್ಲೀನತೆ ಸಮಯ ಸಾಗಿದ್ದನ್ನೇ ಮರೆಮಾಚಿತ್ತು. ಸಂಜೆ ಐದರ ಹೊತ್ತು. ಹೆಣ್ಣಾಳುಗಳು ಕ್ರಮೇಣ ಕರಣಿ, ಸಣಿಕೆ, ಬುಟ್ಟಿ ಮುಂತಾದ ಸಾಮಗ್ರಿಗಳನ್ನು ತೊಳೆದು ಇಡುವ ಜಾಗದಲ್ಲಿ ನೇಮಿಸುತ್ತಿದ್ದರು. ಮೆಸ್ತ್ರೀಯು ಗೋಡೆಯ ಎತ್ತರ ನೆತ್ತಿ ಎತ್ತರಕೆ ಏರಿದ್ದನ್ನು ಕಂಡು ಸಮಾಧಾನಿಯಾಗಿದ್ದ. ಕೆಲಸಿಗರು ಅಲ್ಲಲ್ಲೇ ಸುಧಾರಿಸಿ ನೀರು ಕುಡಿಯುತ್ತಾ ವಿಶ್ರಮಿಸಿದ್ದರು. ಇನ್ನೂ ಕೆಲವರು ಬೀಡಿಯ ಹೊಗೆಯನ್ನು ಗಾಳಿಯಲ್ಲಿ ಸೂಸುತ್ತಿದ್ದರು! ಬಿಡುವಾಗಿದ್ದ ಕಲ್ಲ, ರಂಜುವಿನ ಸಂಗಡ ಮಾತನಾಡಲು ಅವನ ಹತ್ತಿರ ಸುಳಿದನು.
.
'ಅಂತೂ ಕೆಲ್ಸ ಮುಗೀತು, ಅಬ್ಬಾ!'

'ಏನೋ ಅಣ್ಣಾ, ಶೀಘ್ರ ಮುಗೀತು, ನೆಮ್ಮದಿ'

'ಮತ್ತೆ, ಏನು ಓದುತ್ತಿದ್ದೀಯ? ಎಕ್ಸಾಮು ಮುಗೀತಾ?'

'ನಾನು ಒಂಬತ್ತನೇ ವರ್ಗ, ಅದೇನೋ ಪಾಸು ಮಾಡಿ ಮುಂದಕ್ಕೆ ಹಾಕ್ತಾರಂತೆ. ನಮ್ಗೆ'

'ಪರೀಕ್ಷೆ ನಡೀಲಿಲ್ಲ ಒಳ್ಳೇದು ಅಲ್ವಾ, ಯಾರ್ಗ್ ಬೇಕು ಆ ಸಾವು'

'ಹಾಗೇನಿಲ್ಲ.. ಅದರಲ್ಲೇನು? ಒಂದ್ ವಾರ ಬುಕ್ ಹಿಡದ್ರೆ ಸಾಕು, 90+ ಗೆ ಬರೀಬಹುದು'

'ಓಹ್, ಭೇಷ್.. ಏನು ಅಷ್ಟು ಧೈರ್ಯ! ಎಲ್ಲಾ ಓದಿ ಅಭ್ಯಾಸ ಮಾಡಿದ್ದಿಯ ಅಂತಾಯ್ತು. ಇರಲಿ ಬಿಡು, ನಿನ್ ತಂಗಿ?'

'ಅವ್ಳು 7ನೇ ಮುಗ್ಸಿ ಎಂಟಕ್ಕೆ ಹೋಗ್ತಾಳೆ. ಮನೇಲಿ ಅದೇನೋ ಅಡುಗೆ, ಪಾತ್ರೆ ಅಂತ ಇರ್ತಾಳೆ. ಬಿಡುವಿದ್ದಾಗ ಬೊಂಬೆ ಹಿಡೀತಾಳೆ. ಅದೂ ಬೇಡವಾದಾಗ ಅದೆಂತವೋ ಬುಕ್ಸ್ ಎಲ್ಲಾ ಓದುತ್ತಿರ್ತಾಳೆ. ನನ್ನನ್ನೇ ಜಾಣ ಅಂತಾರೆ, ಆದ್ರೆ ನಂಕಿಂತ ಜಾಣೆ ನನ್ ತಂಗಿ'

'ಹೋಗ್ಲಿ ಏನು ಆಗ್ಬೇಕಂತಿದಿಯಾ? ಮುಂದೆ.'

'ನಂಗಿನ್ನೂ ಏನು ಕ್ಲಾರಿಟಿ ಇಲ್ಲ. ಆದ್ರೆ ವಿಶ್ವೇಶ್ವರಯ್ಯ ತರ ಇಂಜಿನಿಯರ್ ಆಗ್ತೀನಿ. ಒಂದೊಂದ್ಸಲ ಐಎಎಸ್ ಆಫೀಸರ್ ಆಗ್ಬೇಕು ಅಂತಾನೂ ಅನ್ಸುತ್ತೆ'

ಹೀಗೆ ನುಡಿದ ರಂಜನ್, ತನ್ನ ಪೋಷಕರ ಕರೆಗೆ ಓಗೊಟ್ಟು ಅವರೆಡೆಗೆ ಓಡಿದ. ತನ್ನವ್ವ ಅಪ್ಪನ ಜತೆಗಿನ ರಂಜು, ಅವನ ಕನಸು, ಅವನಲ್ಲಿನ ಆತ್ಮಸ್ಥೈರ್ಯ ಎಲ್ಲವೂ ಕಲ್ಲನ ಕಂಗಳಿಗೆ ಹರ್ಷವನ್ನು ತುಂಬಿದವು. ಅವನಲ್ಲಿ ಆಗಾಗ್ಗೆ ಕಾಡುತ್ತಿದ್ದ ಕೊರಗು, ನಿರುತ್ಸಾಹ ಇವರಲ್ಲಿನ ಉತ್ಸಾಹದ ಸ್ಪರ್ಶಕ್ಕೆ ತನ್ನಿಂತಾನೇ ಕರಗಲಾರಂಭಿಸಿತು. ಹೊಸ ಹುಮ್ಮಸ್ಸು ಮನಸ್ಸಿಗೆ ಚೈತನ್ಯ ತುಂಬಿ ಸಾಂತ್ವನ ಹೇಳಿತು.
.
ತನ್ನ ಬದುಕೂ ಇದೆ ತೆರನಾಗಿ ಅಂದರೆ, ರಂಜುವಿನ ಬದುಕಿನಂತೆ ಸಾಗಿ ಬಂದದ್ದನ್ನು ನೆನಪಿಸಿಕೊಂಡು ಗದ್ಗದಿತನಾದ 'ಕಲ್ಲ'. ತಾನು ಕಳೆದ ಬಡತನದ ಬಾಲ್ಯ. ಅವ್ವ-ಅಪ್ಪನ ದುಡಿಮೆ. ಕಾರ್ಪಣ್ಯಗಳನ್ನು ಬಲವಂತವಾಗಿ ಬದಿಗೊತ್ತಿ ಕಟ್ಟಿಕೊಂಡ ಕಲಿಕಾ ಬದುಕು. ಕಲಿಯುತ್ತಲೇ ಕಳೆದ ವಿದ್ಯಾರ್ಥಿ ಜೀವನ. ಇಂಜಿನಿಯರಿಂಗ್ ಓದುವಾಗ ಬದಲಾದ ಜೀವನಕ್ರಮ. ತಾನು ಮಾನಸಿಕವಾಗಿ ನೊಂದು ಬೆಂದ ದಿನಗಳು, ಉಡಾಫೆಯಲ್ಲೇ ಮುಗಿಸಿದ ತಾಂತ್ರಿಕ ವಿದ್ಯಾಭ್ಯಾಸ ಅಪ್ರಯೋಜಕವಾಯಿತೆಂದು ಕೊಂಚ ಬೇಸತ್ತ. ಕಾಲ ಬದಲಾಗಿತ್ತು. ಇನ್ನೊಬ್ಬರ ಬದುಕಿನ ಪರೋಕ್ಷ ದೃಷ್ಟಾಂತ ತನ್ನ ಬದುಕಿನ ಭವ್ಯತೆಯನ್ನು ಪರಾಮರ್ಶಿಸಿತು. ಬದುಕು ಸಾಗಬೇಕಿದ್ದ ದಾರಿಗೆ ಪುನಃ ತಂದು ತಲುಪಿಸಿತ್ತು. 'ರಂಜು'ವಿನ ಮುಖೇನ ತನ್ನನ್ನೇ ತಾ ಕಂಡ ಕಲ್ಲೇಶ. ಆತನಿಗೆ ಆ ಹುಡುಗ ತನ್ನಂತೆ ಚಿಗುರುತ್ತಿರುವ ಮತ್ತೋರ್ವ ಸಾಹಸಿಗನೆನಿಸಿತು.
.
ಆಲೋಚನೆಗಳ ಆಲಾಪಗಳ ನಡುವೆ ರಂಜು 'ಬೈ ಅಣ್ಣಾ' ಅಂದಿದ್ದು ಈತನಿಗೆ ಕೇಳಿಸಿರಬೇಕು. ಕಣ್ಣರಳಿಸಿ ಮತ್ತೊಮ್ಮೆ ಆತನಲ್ಲಿ ದೃಷ್ಟಿ ಹಾಯಿಸಿ ತುಟಿಬಿಚ್ಚದೆ ಕೈಬೀಸಿ ಹೋಗಿ ಬಾಯೆಂದನು. ತಂದೆ ತಾಯಿಯರ ಕನಸಿನ ಕೂಸು ಅವರಿಬ್ಬರ ಜತೆ ಉಲ್ಲಾಸದಿ ಸಾಗಿತು.

ಚಿತ್ರಕೃಪೆ: ಅಂತರ್ಜಾಲ
.
ಕಲ್ಲನ ಅರಳಿದ ಕಣ್ಣುಗಳು ತೆರೆದೇ ಇದ್ದವು. ಕಣ್ಣಿನಂಚಿನಲ್ಲಿ ಕೊಂಚ ಕಾಣದ ಕಣ್ಣೀರಿದ್ದವು. ಅದೆಂಥ ಸಡಿಲಿಕೆ, ಅದೆಂಥ ನಿರಾಳತೆ, ಅದೆಂತಹ ಮನಸ್ಥಿತಿ.. 
ಹೇಳತೀರದ ಬದಲಾವಣೆಗೆ ಶುರುವಾಗಿತ್ತು ಕ್ಷಣಗಣನೆ...

ಪರಿವರ್ತಿತ ಕಲ್ಲನ ಹೃದಯ ಸದ್ದಿಲ್ಲದೇ ಸಾಗಿತು, ಮನೆಕಡೆಗೆ!

      **  **  ***  **  **  ***  ***  ** **  **  ***  

~ಎಂ.ಕೆ.ಹರಕೆ

ಸುಳ್ಳು

( ಚಿತ್ರಕೃಪೆ : ಅಂತರ್ಜಾಲ ) ಸುಳ್ಳನ್ನೇ ಬಿತ್ತಿ ಸುಳ್ಳನ್ನೇ ಬೆಳೆದು ಸುಳ್ಳನ್ನೇ ಬಿಡಿಸಿ, ಬೀಸಿ, ಜೀರ್ಣಿಸಿ ಸುಳ್ಳಲ್ಲೇ ಜೀವಿಸಿ ಸುಳ್ಳಲ್ಲೇ ಸುಳಿದಾಡಿ ಸುಳ್ಳಲ್ಲೇ ತ...

ಹಾಗೇ ಒಮ್ಮೆ ಓದಿ ನೋಡಿ