![]() |
ಚಿತ್ರಕೃಪೆ : ಅಂತರ್ಜಾಲ |
ಕಣ್ಣ ತುಂಬ ಹಸಿರು ತುಂಬಿ
ಮನಸು ಈಗ ಅಲೆವ ದುಂಬಿ!
ಜೀಪು ಹತ್ತಿ ಕುಳಿತೆವು..
ಅಗ್ಗು ತಗ್ಗು ಜಿಗಿದವು!!.
ಧೂಳು ದಣಿವು ಅಂಟಲಿಲ್ಲ
ಕೂಡಿ ನಡೆದು ಮರೆತೆವೆಲ್ಲ!!
ಗಿರಿಯ ತುದಿಯ ಹಾದಿಯಲ್ಲಿ
ತಂಪು ಗಾಳಿ ಸೋಂಕಿದೊಡನೆ
ನೀಲಿ ಬಾನು ಕೆಳಗೆ ಇಳಿದು,
ಮಿನುಗು ಭಾನು ಕಣ್ಣ ಹೊಡೆದು,
ಸನ್ನೆಯಲ್ಲೇ ಎಲ್ಲರನ್ನು ಬಳಿಗೆ ಕರೆದನು
ಸ್ವರ್ಗದಂಚಿನಲ್ಲಿ ನಮ್ಮ ಬಿಟ್ಟು ಹೋದನು!!
ಸಗ್ಗದಿಂದ ಕೆಳಗೆ ಇಳಿದು,
ಗಂಗೆಯೊಲವ ಅರಸಿ ನಿಂತು,
ಹರಿವ ಜಲದ ಮೂಲ ಅರಸಿ ಹೋದೆವಲ್ಲಿಗೆ!
ಕೊರೆವ ನೀರ ಗರ್ಭದಲ್ಲಿ ಜಿಗಿದೋ ಮೆಲ್ಲಗೆ!!
ಜಾರೋ ಬಂಡೆ, ಚೂಪು ಕಲ್ಲು ಪಾದಗಳಿಗೆ ವೇದನೆ,
ಶೀತ ಶರಧಿ ಮಡಿಲಿನಲ್ಲಿ, ನಿಸರ್ಗದ ಆರಾಧನೆ!!
ನನ್ನ ಗೆಲುವು ನಿನ್ನದೆಂದು
ನಿನ್ನ ನಲಿವು ನನ್ನದೆಂದು
ಅರಿತು ಬೆರೆತು ನಿಲ್ಲೋ ವಯಸ್ಸು, ಇಂದು ನಾಳೆಗೆ!
ಹಂಚಿ ಕುಡಿವ ಶುದ್ಧ ಮನಸ್ಸು, ನಮ್ಮ ಬಳಗಕೆ!!
ಪರಮಾತ್ಮನ ಒಳಗೆ ಇಳಿಸಿ
ನರನಾಡಿಯ ಚುರುಕುಗೊಳಿಸಿ
ಹರಟೆ ಹೊಡೆವ ಸೂಕ್ತ ಕಾಲ, ಮತ್ತೆ ಸಿಗುವುದೇ?
ನಮಗೆ, ಮತ್ತೆ ಸಿಗುವುದೇ?
ನಡು ನೀರಲಿ ಬಿಟ್ಟು ಹೋದ
ಭಾವ-ಬಂಧ ಕೆಡಿಸಿ ಹೋದ
ವ್ಯಕ್ತಿಗತ ಬಳಸಿ ಬರುವ,
ಹತ್ತು ಹಲವು ಕಥೆಗಳು!
ಅವರಿಗವರದೇ ವ್ಯಥೆಗಳು!!
ಈ ಮಧ್ಯೆ, ಅವರೆಲ್ಲಾ
ಕ್ಷಣಿಕ ಕಾಲ ದುಃಖ ಮರೆತು ಕುಣಿಯುತ್ತಿದ್ದರು!
ಬದುಕ ಶೂನ್ಯ ಬದಿಗೆ ಸರಿಸಿ ಹಾಡುತ್ತಿದ್ದರು!!
ಆದ್ದರಿಂದ,
ಆಲ್ಕೋಹಾಲಲು ಹಾಲಿದೆ!
ಎಲ್ಲರ ನೋವಲು ಪಾಲಿದೆ!!
~ ಎಂ.ಕೆ. ಹರಕೆ
ಅದ್ಭುತ ಬರವಣಿಗೆ!!
ಪ್ರತ್ಯುತ್ತರಅಳಿಸಿಧನ್ಯವಾದಗಳು!!🩵
ಪ್ರತ್ಯುತ್ತರಅಳಿಸಿ