ಶನಿವಾರ, ನವೆಂಬರ್ 11, 2023

ಮೌನಜ್ವಾಲೆ

ಹಾಡು ಬರೆಯಬೇಕು

ಅಳುವ ಮರೆಯಬೇಕು

ಮಾತು ಮುಗಿದ ಮೇಲೆ

ವಿರಹ ಮೌನಜ್ವಾಲೆ!


ಯಾವ ಭೀತಿಯಲ್ಲಿ

ಯಾರ ಪ್ರೀತಿಯಲ್ಲಿ

ಏನೂ ಹೇಳಲಾರೆನು

ಕೂಡಿ-ಕಳೆಯಲಾರೆನು!


ಅಂದವಾದ ಮೈಸಿರಿ

ಕಳೆದುಕೊಂಡ ವೈಖರಿ

ಬೀಡುಬಿಟ್ಟ ಭಾಗ್ಯವ

ಬಿಡಿಸಿ ಬಿಟ್ಟು ಕೊಟ್ಟವ!
(ಚಿತ್ರಕೃಪೆ: ಅಂತರ್ಜಾಲ)ಅಂಚಿನಿಂದ ಅಂಜಿಕೆ

ಜಾರಿ ಬಂದ ವೇಗಕೆ

ಮಾತು ಮೌನವಾದವು

ಬಯಕೆ ದೂರವಾದವು!


ಏನು? ಎಂತ ? ಎಲ್ಲಿಗೆ?

ಘಮಿಸಿ ಹೋದೆ ಮಲ್ಲಿಗೆ

ನೆನೆದು ಬಿಕ್ಕಲಾರೆನು

ಅಳಿಸಿ ಉಳಿಯಲಾರೆನು!


ಭಾವ ಬಳಸಿ ಬಂದೆ ನೀ

ಬದುಕ ತಿಳಿಸಿ ಹೋದೆ ನೀ

ಮನಸ ಬೀದಿಯಲ್ಲಿ

ಅಡಗು ತಾಣವೆಲ್ಲಿ?


~ ಎಂ.ಕೆ.ಹರಕೆ

ಗುರುವಾರ, ನವೆಂಬರ್ 9, 2023

ಅಭಿಮಾನಿ

ನಿನಗಾಗೆ ನನ್ನೊಲವು  ಬರೆಯುತಿದೆ ಓ ಗೆಳತಿ

ನನಗಾಗಿ ಒಂದೊಮ್ಮೆ ; ಓದೇ ಒಲವಿನ ಒಡತಿ!!


ಕಾಯಿಸಿ ಕಾಯಿಸಿ ನೀ

ಕಾಯಿಲೆಯ ಬರಿಸದಿರು

ಕಾಯುವ ಎಣ್ಣೆಯಲಿ

ನನ್ನೆದೆಯ ಕುದಿಸದಿರು!!


ಅದೃಷ್ಟವೋ ಅವಕಾಶವೋ 

 ಅವತರಿಸಿದೆ ಕಣ್ಮುಂದೆ

ಹೊಂಬೆಳಕ ರಶ್ಮಿಯಲಿ

ನಸುನಗೆಯ ಚುಂಬಿಸಿದೆ !!
  (ಚಿತ್ರಕೃಪೆ: ಅಂತರ್ಜಾಲ)


ಮೇಕಪ್ಪಿನ ಮಹಾಪಾಪ

ನಿನ್ನ ವದನಕೆ ಬೇಕಿಲ್ಲ

ಸಿಂಗಾರದ ಸಂಕೋಲೆ

ನಿನ್ನ ಸಿರಿಗೆ ಸಮವಿಲ್ಲ !!


ಮೌನದ ಮಾತಲ್ಲೇ 

ನಿನ್ನ ಗುಂಗ ಹಿಡಿಸಿದೆ!

ಇಂಪಾದ ಹಾಡಲ್ಲೇ

ನನ್ನ ಹೃದಯ ತಣಿಸಿದೆ!!


ಅನುದಿನವು ಅನುಕ್ಷಣವು

ಅಭಿಮಾನಿಯೇ ನಾ ನಿನಗೆ

ಅನವರತ ಪ್ರೇಮದಲಿ

ಹಾಡುವೆಯಾ? ನೀ ನನಗೆ!!


~ ಎಂ. ಕೆ. ಹರಕೆ
ಮೌನಜ್ವಾಲೆ

ಹಾಡು ಬರೆಯಬೇಕು ಅಳುವ ಮರೆಯಬೇಕು ಮಾತು ಮುಗಿದ ಮೇಲೆ ವಿರಹ ಮೌನಜ್ವಾಲೆ! ಯಾವ ಭೀತಿಯಲ್ಲಿ ಯಾರ ಪ್ರೀತಿಯಲ್ಲಿ ಏನೂ ಹೇಳಲಾರೆನು ಕೂಡಿ-ಕಳೆಯಲಾರೆನು! ಅಂದವಾದ ಮೈಸಿರಿ ಕಳೆದು...