ಸುಳ್ಳನ್ನೇ ಬಿತ್ತಿ
ಸುಳ್ಳನ್ನೇ ಬೆಳೆದು
ಸುಳ್ಳನ್ನೇ ಬಿಡಿಸಿ, ಬೀಸಿ, ಜೀರ್ಣಿಸಿ
ಸುಳ್ಳಲ್ಲೇ ಜೀವಿಸಿ
ಸುಳ್ಳಲ್ಲೇ ಸುಳಿದಾಡಿ
ಸುಳ್ಳಲ್ಲೇ ತಿಳಿಯಾದ ಕನಸು ಕಾಣುವ ಕಂಗಳು..
ನೀ ಕಾಣುತ್ತಿರುವುದು ಸುಳ್ಳು;
ಈ
ಸುಳ್ಳೇ ನಿನ್ನನ್ನು ಮತ್ತಷ್ಟು ಸುಳ್ಳಿಗನಾಗಿಸಿದೆ.
ಹೀಗೆ, ಮುಂದುವರೆದರೆ
ಸುಳ್ಳಿನ ಸುಳಿಯಲ್ಲಿ
ನಿನ್ನ
ಕನಸುಗಳು ಸುಳ್ಳಾಗುವವು!
ಮನಸುಗಳು ಹೋಳಾಗುವವು!
ಈ ಶುದ್ಧಸತ್ಯವನ್ನು
ಅರಿಯದೆ ಹೋದರೆ?
ಸುಳ್ಳು ನಾಲಗೆಯ ಪರಮಸ್ಥಾನಿಯಾಗುವುದು!
ಅನೃತವೇ ಅಮೃತದ ಸವಿಯ ನೀಡಲುಬಹುದು!
ಸುಳ್ಳೇ ಸೋಪನವಾಗಿ
ಸುಳ್ಳೇ ಸರಳವಾದ
ಜೀವನ ಮಾರ್ಗವಾಗಿಯೂ ಬಿಡಬಹುದು!
ಸದ್ದಿಲ್ಲದೆ
ಸುಂದರ ಸುಳಿಗೆ ಸಿಲುಕಿಸಿ
ಬದುಕ 'ಸುಲಿಗೆ' ಮಾಡಿ ಬಿಡಬಹುದು!
ಸುಳ್ಳು ಹೇಳುವವನಿಗೆ
ಸುಳ್ಳು
ಸೊಳ್ಳೆಯಷ್ಟೇ ಸಣ್ಣದಾಗಿ ಕಂಡರು,
ಅದರಿಂದ
ಸಿಡಿಯುವ ಅವಿಶ್ವಾಸ ಸಲೀಸಾಗಿ
ಸರಳ
ಹೃದಯವನ್ನು ಸೀಳಿ
ಸರಪಳಿಯಲ್ಲಿ ಕಟ್ಟಿ
ಹೇಳದೆ ಕೇಳದೆ ಹುಳಿಹಿಂಡಿ ಹಿಂಸಿಸುವುದು..!
ಸಂಯಮದ ಮನಸ್ಥಿತಿ
ವಿಕಾರವಾಗಿ
ನರಳಿ ನರಳಿ
ಸಂದಿಗ್ಧತೆಯ ಸವಾಲಿಗೆ
ಸೋತು ಸೋತು ಸುಣ್ಣವಾಗುವುದು!
ಸುಳ್ಳೇ,
ಸಮಯವ ವ್ಯರ್ಥ ವ್ಯಯಿಸದಿರು..
ಸಾಕಿನ್ನು
ಈ ಸುಳ್ಳಿನ ಸೊಲ್ಲು!
ಸರಿಮಾಡಿ
ನಿನ್ನ ಬದುಕನು ಗೆಲ್ಲು!
ಈ ಸುಳ್ಳಿನ ಸುಳಿಯಿಂದ
ನುಸುಳಿ
ಬಹಳ ಕಾಲದ ಸರಳ ಜೀವನಕ್ಕೆ
ಮರಳಿ
ನಳನಳಿಸಿ ಬೆಳಗುವ ಬೆಳ್ಳಿಯಾಗು!!
ಕಾಯ್ದು ಕುಳಿತಿರುವೆ!!
~ ಎಂ.ಕೆ.ಹರಕೆ
ಸುಳ್ಳೆ ಸುಳ್ಳು ಈ ಜೀವನದಲ್ಲಿ ಎಲ್ಲಾ ಸುಳ್ಳು..,🍂
ಪ್ರತ್ಯುತ್ತರಅಳಿಸಿ