ಶುಕ್ರವಾರ, ಮಾರ್ಚ್ 23, 2018

ಪುನಃ ಹಾಡಿತು....
ಭಾವ ಭಾವಗಳ ಸುಳಿಯಲ್ಲಿ
ಮಿಂದೇಳುವ ಓ ಮನವೇ....
ಕ್ರಮಿಸಿದ ದೂರವ ನೆನೆದು ದುಃಖಿಯಾಗಬೇಡ..
ಉಳಿದ ಪಥವನು ಕಂಡು ನಿಟ್ಟುಸಿರನು ಬಿಡಬೇಡ....

ಭಾವನೆಗಳ ಸಾಗರವೇ ಸಾರ್ಥಕ ಬದುಕಿಗೆ ಸಾಕ್ಷಿ
ಪ್ರತಿ ಭಾವದಂಚಿನಲೂ ತೆರೆದಿರಲಿ ನಿನ್ನ ಅಕ್ಷಿ.....
ನೋಡುವ ಕಂಗಳಿಗೆ ಕಂಡರೂ ಬಹುರೂಪ
ಚಿಂತನ-ಮಂಥನದಿಂದ ಕಾಣ್ವುದು ಕಟುಸತ್ಯ.....

ಪರಿಪರಿಯಾಗಿ ಪಾಡುತಿದೆ, ಹೃದಯಾಂತರಾಳ...!
ಏನಾಗಿದೆ, ನಿನಗೆ ಸರಿಯಾಗಿಸು ನಿನ್ನ ಬದುಕೆಂದು..!!
ಎಲ್ಲಿ ನಿನ್ನಯ ನಿಷ್ಠೆ, ಎಲ್ಲಿ ನಿನ್ನಯ ಶ್ರಮ?
ಎಲ್ಲಿ ಅಡಗಿತು ಆ ನಿನ್ನ ಹೊಸ ವರ್ಷದ ಸಂಕಲ್ಪ??
                                               

                       
ಪುನಃ ಹಾಡಿತು..........
ಸತ್ಯಕ್ಕೆ ಎದೆಗುಂದದೆ, ಸುಳ್ಳಿನ ಬಳಿಜಾರದೆ;
ದಾಸ್ಯಕ್ಕೆ ಸಿಲುಕದೆ, ಮೋಹಕ್ಕೆ ಬಲಿಯಾಗದೆ;
ಸಿಟ್ಟಿಗೆ ನೀ ಸುಡದೆ, ಲೋಭಕ್ಕೆ ಮರುಳಾಗದೆ;
ಸವೆಸು ಈ ದೇಹವ ಪರಮಾತ್ಮನ ಪರಿಕಲ್ಪನೆಯಲ್ಲಿ...
       
                                      ~ಎಂ.ಕೆ. ಹರಕೆ

       
ಸೋಮವಾರ, ಫೆಬ್ರವರಿ 26, 2018

ನಿರಾಳತೆ

ನಿದ್ರೆ ಬಾರದ , ಅರೆ ಮುಚ್ಚಿದ ಕಂಗಳಲಿ
ನೂರಾರು ಸಿಹಿ ಆಲೋಚನೆಗಳು...
ಆಹ್ಲಾದಕರ ಶುಭ ಸಂಜೆಯ ಕ್ಷಣಗಳು
ಬೆಳದಿಂಗಳ ಶಶಿಯಂತೆ ಬೆಳಗುತಿವೆ...

ಚಿತ್ರಕೃಪೆ : ಅಂತರ್ಜಾಲ 
ಆಹಾ! ಇದೆಂಥಾ ನಿರಾಳತೆ,
ಕೆಲಸ-ಕಾರ್ಯದ ಗೋಜುಗಳಿಲ್ಲ;
ತಡಬಡಾಯಿಸಿ ಓಡುವ ಅಗತ್ಯವಿಲ್ಲ;
ಸಂದಿಗ್ಧ ಸವಾಲುಗಳ ಸಹವಾಸವೇ ಇಲ್ಲ!!

ನಾಳಿನ ಚಿಂತೆಯ ಚಿಂತನವೆಲ್ಲಿ?
ನೆನ್ನೆಯ ಕಾರ್ಪಣ್ಯ ಸವೆದವರಾರು?
ಇಂದಿನ ಸುಖ-ಸಂತಸ,ಶುದ್ಧತೆ
ಜಂಜಾಟದ ಮನಸ್ಥಿತಿಯ ಬಡಿದೋಡಿಸಿರಲು!!!

ಹೃದಯ ಸ್ಪರ್ಷಿ ಪ್ರೀತಿ-ಮಮತೆ,
ನಿಷ್ಕಲ್ಮಷ ಆವ-ಭಾವ;
ಅಳತೆಯಿರದ ತುಸು ದುಡಿಮೆಗೆ
ಮನದಾಳವಾಯಿತು ಬಲು ಹಗುರ...

                                -ಎಂ.ಕೆ.ಹರಕೆ

ಗುರುವಾರ, ಫೆಬ್ರವರಿ 15, 2018

ಮಲೆನಾಡ ಮಧುರತೆ

ಹಸಿರು ಹುಲ್ಲಿನ ಮುದ್ದಾದ ಗಿರಿಧಾಮಗಳೆ,
ನಿಮ್ಮನ್ನು ಸೃಷ್ಟಿಸಿದ ನಿರ್ಮಾತೃ ಅವನಾರು?
ಹಸಿರನ್ನೇ ಹೊದ್ದ ಮಲೆನಾಡ ತಾಯೇ,
ನಿನ್ನೀ ಸೌಂದರ್ಯಕ್ಕೆ ಸರಿಸಾಠಿ ಯಾರು?

ಮಲೆನಾಡ ಮಧುರತೆ ಜನ-ಮನವನು ತಣಿಸಿದೆ 
ಹಿಂಬಾಲಿಸಿ ಸಾಗಿದ ದಾರಿ,ಕಣ್ತುಂಬ ಕುಣಿದಿದೆ…
ಅಂಭುಜದ ರವಿಮಾಮ ಕಣಿವೆಯೊಳ್ ಅವಿತಿರಲು
ನಮ್ಮ ಆಗಮನ ಅರಿತು,ನಾಚುತ ಹೊರಬರುತಿಹನು…

ಕಾಫಿಯ ಘಮಘಮ ಗಮನವನು ಸೆಳೆದಿರಲು
ಉಪ್ಪಿಟ್ಟಿನ ಸ್ವಾದಕೆ ನಾಲಿಗೆ ಹದಗೊಂಡಿದೆ…
ಓಡಾಡಿದ ಕಾಲ್ಗಳು ದಣಿವನ್ನೇ ಮರೆತಿರಲು
ಸೌಂದರ್ಯೋಪಾಸನೆಯ ಸವಿಗೆ ಮೈಮರೆತು ಸಾಗಿವೆ…

ಜುಳು-ಜುಳು ಸ್ವರನಾದ ಕಿವಿಯೊಳ್ ಗುಣುಗುತ್ತಿರಲು
ಆಲಿಸಿದ ಮನವೀಗ ನೀರಿನೊಳ್ ಧುಮುಕಿದೆ..
ಜಾರುವ ಬಂಡೆಗಳಲಿ ಮೀಯುವುದೇ ಮಹಾಭಾಗ್ಯ
ಮಹಾಮಜ್ಜನದನುಭವವನು ಪಡೆದವನೇ ಧನ್ಯ!!
    -ಎಂ.ಕೆ.ಹರಕೆ  

ಶುಕ್ರವಾರ, ಜನವರಿ 12, 2018

ಚುಟುಕು ಸಾಹಿತ್ಯ🏃

                                                          ಚಿತ್ರಕೃಪೆ:ಅಂತರ್ಜಾಲ

                   ★ "ಕವಿತೆ" ★
ಪ್ರಾಸಗಳ ಹುಡುಕುತ್ತಾ ಸವೆಯಿತು ಕವಿ ಹೃದಯ
ಕವಿತೆಯನ್ನೇ ಧಿಕ್ಕರಿಸಿ ಸಾಗಿತ್ತು ಆ ಸಮಯ!
ಸಮಯಾಸಮಯದಿ, ಕಂಡನಾ ಭವ್ಯ ರೂಪ
ಬರೀ ಕನಸಲ್ಲೇ ಆ ಕನ್ಯೆಗೆ ತಾನಾದನು ಭೂಪ!
ಅಮೃತದ ಘಳಿಗೆಯಲಿ ನೂರಾರು ಸಿಹಿಗನಸು
ಕನಸಿನ ಸಾಮ್ರಾಜ್ಯಕ್ಕೆ ತಾನೇ ಪಟ್ಟದರಸು!
ನಿತ್ಯವೂ ಕೌತುಕದಿ ಶೃಂಗಾರ ಪ್ರಣಯ ಗೀತೆ
ರೋಸಿದ ಕವಿ-ಹೃದಯಕ್ಕೆ ಹೊಳೆಯಿತು ಈ ಕವಿತೆ!!


                      ◆"ಜೀವನ"◆
ಭವನೆ ಬೇಗೆಗಳಿಗೆ ಕೊನೆಯಿಲ್ಲದ ಜೀವನ
ಪ್ರೀತಿ-ಮಮತೆ,ವಾತ್ಸಲ್ಯ ಬಿತ್ತರಿಸುವ ಜೀವನ
ಹಬ್ಬ-ಹರಿದಿನಗಳಂತೆ ವಿಜೃಂಭಿಸುವ ಜೀವನ
ಮನದ ನಕಾಶೆಯನ್ನು ಪ್ರತಿಬಿಂಬಿಸುವ ಜೀವನ!!
ಜೀವ ಎಂಬೆರಡಕ್ಷರಕ್ಕೆ ತಾನಾಗಿರುವ 'ಜೀವ'ನ
ಸಂಸ್ಕಾರವೆಂಬುದರಿಯದೇ ಒದ್ದಾಡುವ ಜೀವನ
ಸಾಧನೆಯ ಮಡಿಲನ್ನು ಕಂಡರಿಯದ ಜೀವನ
ಕಾಣದ ಆ ಪಥವ ಅರಸುತ್ತಿರುವ ಜೀವನ!!


                    ■ ಸಾಧನೆ ■
ಗುರಿ-ಸಾಧನೆಯೆಂಬುದು 'ಸ್ವಾರ್ಥ'ವೇ?
ತ್ಯಾಗ,ಪರಹಿತಕ್ಕಿಂತ ಮಿಗಿಲಾದುದಿಲ್ಲವೇ?
ಕಪಟ-ಮೋಸದ ಸಮಾಜ ನೋಡಲು ಸುಂದರವೇ?
ಅಥವಾ ಕಾಣುವ ನಮ್ಮ ನಯನಗಳೇ ಅಶಕ್ತವೇ?!
ಬಿಳಿಹಾಳೆಯಲ್ಲಿನ ಕರಿಚುಕ್ಕಿಯೇ ವಿಶೇಷ
ವ್ಯಕ್ತಿತ್ವಕ್ಕೆ ಕಡೆಗೆ ಸಾಧನೆಯೇ ಶೇಷ....
ಅಮರವಾಗುವವು ವ್ಯಕ್ತಿಯ ಬರಹ-ಕವಿತೆ ಮಾತ್ರ
ಆದರದರಲ್ಲಿರಲಿ ನಿಷ್ಕಲ್ಮಶ ಪ್ರೀತಿ-ಭಾವಗಳ ಸೂತ್ರ..

                        ◆  ತೃಪ್ತಿ  ◆
ಚಿಂತೆಯೆಂಬ  ಚಿತೆಯಲ್ಲಿ ಬೇಯದೆ,
ನಗುವೆಂಬ ಬಾಳಧರಣಿಯಲ್ಲಿ ಬದುಕು.....
ಅತಿಯಾಸೆಯೆಂಬ ಆನೆಯ ಬಯಸದೆ,
ತೃಪ್ತಿಯೆಂಬ ನಾಯಿ ಕುನ್ನಿಯನು ಸಾಕು....

ಶನಿವಾರ, ಜನವರಿ 6, 2018

ಹೇಗಿರುವಳು ಈಗ? ಮೊಗ್ಗಂತ್ತಿದ್ದಳು ಆಗ!

"ಹುಚ್ಚುಕೋಡಿ ಮನಸು ಹದಿನಾರರ ವಯಸ್ಸು",ಎಂಬಂತೆ ಹದಿಹರೆಯದಲ್ಲಿ ಪ್ರತಿಯೊಬ್ಬರಿಗೂ ನೂರಾರು ಹೊಸ-ಭಾವಗಳ ಪರಿಚಯವಾಗುತ್ತದೆ.. ಆದರೆ ಅದರ ಮಿತಿಯನ್ನ ಊಹಿಸಲೂ ಅಸಾಧ್ಯ.ಹೀಗೆ ನನ್ನ ಗೆಳೆಯನೊಬ್ಬ, ತನ್ನ ಹಳೆಯ ಹುಡುಗಿಯನ್ನು  ನೆನೆದು facebookನಲ್ಲಿ ಒಮ್ಮೆ ಈಗ ಹೇಗಿರಬಹುದು?ಎಂಬ ಕಲ್ಪನೆಯಲ್ಲಿ ಶೋಧ  ಮಾಡಲೆತ್ನಿಸಿದ ಸಂಧರ್ಭವೇ ಈ ಕವಿತೆಯ ಮೂಲ...

ಮುಂದೆ ಏನಾಯಿತು?!...

ಇಲ್ಲಿದೆ ಉತ್ತರ..👇

ಬಾಳರಸಿಯ ನೆನಪಿನಲಿ ತೆರೆಯಿತು ಮುಖಪುಸ್ತಕ
ನೂರಾರು ಕಲ್ಪನೆಗಳು ಹೃದಯದ ಒಳ ಕೋಣೆಯಲಿ....
ಹದಿನಾರರ ವಯಸ್ಸಿನಲ್ಲೇ ಚಿತ್ತಾರ ಮೂಡಿಸಿದ;
ನಸುನಗೆಯ ಬಿತ್ತರಿಪ ಚೆಲುವಾಂಬೆ ಆಕೆ!!

ಹೇಗಿರುವಳು ಈಗ? ಮೊಗ್ಗಂತ್ತಿದ್ದಳು ಆಗ!
ಅರಳಿದ ಹೂವಿನ ಹಾಗೆ ಘಮಘಮಿಸುತಿರುವಳೇ?
ಇಲ್ಲ...,
ಘಾಸಿದ ಪುಷ್ಪದಂತೆ ಮೈಮುದುಡಿ ಕೂತಿಹಳೇ?
ಹೇಗಿದ್ದರೇನವಳು..?! ಗುಂಡಿಗೆಯನು ಕದ್ದೊಯ್ದಿರಲು!

ತಾಸುಗಟ್ಟಲೆ ಶೋಧಿಸಿ ಸಂಧಿಸಿದನವಳ ಪುಟವ..
ಹೇಗೆ ಹೇಳಲಿ ಈಗ,ಹರ್ಷೋದ್ಘಾರದ ಭಾವ!
ಮತ್ತೊಮ್ಮೆ-ಮಗದೊಮ್ಮೆ  ಎಡೆಬಿಡದೆ ಪರೀಕ್ಷಿಷಿದ
ಅವಳದೇ ಈ ಮೊಗವೆಂದು, ತನ್ನೊಳಗೆ ಪರಮ ತೃಪ್ತನಾದ!

ಕಲಿಯುಗದ ಅಂತರ್ಜಾಲದಲಿ ಜಾರುವುದು ಒಂದೇ,
ದ್ವಾಪರದ ಚಕ್ರವ್ಯೂಹದೋಳು ಸಿಲುಕೋದೂ ಒಂದೇ!
ಅಭಿಮನ್ಯುವಿನಂತೆ ಮನಸ್ಸು ಜಾಲದಲಿ ಮರೆಯಾಗಿದೆ..
ಬ್ಯಾಟರಿ ಕ್ಷೀಣಿಸದ ಹೊರತು ಭೇದಿಸಲಾಗದು ಜಾಲ!

ಕ್ಷೀಣಿತ ಅಧಿಸೂಚನೆ ಒಡನೆ ಹೊರಹೊಮ್ಮಿರಲು
ಗಡಿ-ಬಿಡಿಯಲಿ ಕಡೆ ಸಾಲು ಇವನ ಕಣ್ಗೆ ಬಿದ್ದಿರಲು ...
ಬರೆದಿದ್ದಳು ಆಕೆ, ಭಾವೀಪ್ರಿಯತಮನನ್ನೇ ಕುರಿತು;
"ನಿಶ್ಚಯವಾಗಿಹ ವಿಷಯ,ಕಂಡೊಡನೆ ಆವರಿಸಿತು ಮೌನ!!

ಸಮಯ ಈಗಾಗಲೇ ನಡುರಾತ್ರಿಯ ದಾಟಿದೆ,
ಉಲ್ಲಾಸದ ಕ್ಷಣವೀಗ, ಕಣ್ಣೀರಿಗೆ ಬದಲಾಗಿದೆ!
ಕಣ್ಣಿನಂಚಿನ ಅಶ್ರು, ಧಾರೆಯನೆ ಹರಿಸಿರಲು
ಉಕ್ಕುತಿಹ ಭಾವೋದ್ವೇಗದಲಿ ನಿದ್ರಿಸಿತು ಬಡಜೀವ!!

                                     -ಎಂ .ಕೆ.ಹರಕೆ

ಏನಾದರೂ ಮಾಡು!

  "ಏನಾದರೂ ಮಾಡು ಶ್ರದ್ಧೆಯಿಂದ ಮಾಡು" ಬಯಸದೆ ಬಂದವರಿಲ್ಲ ಬೇಯದೆ ಹೋಗುವರಿಲ್ಲ! ಬೀಳದೆ ಗೆದ್ದವರಿಲ್ಲ ಬಾಳಲಿ ನೋವೆ ಎಲ್ಲ! (ಚಿತ್ರಕೃಪೆ: ಅಂತರ್ಜಾಲ) ಹೇಳುವು...