ನನ್ನಯ್ಯ ಕಲ್ಲಯ್ಯ-ಮಲ್ಲಯ್ಯನೇ||
ಹಾಲು ಹಲ್ಲಿನ, ಜೊಲ್ಲ ಸುರಿಸುವ, ಪ್ರಫುಲ್ಲ ತೊದಲು ಸೊಲ್ಲಿಗನು ನೀ;
ನೀಳ ಕಾಯನು ಕೂಡ|
ಕಹಿ ಕಾರುವ, ಪಿತ್ತವುಕ್ಕಿಸುವ, ಕಲ್ಲಿನಂತಹ ಕಗ್ಗಾಯಿ ನೆಲ್ಲಿಯಿದು;
ಬಿಸುಟುವುದು ನಿನ್ನ ಬಾಯ ಒಸಡು||
ನೆಲ್ಲಿಯಿದು ಕಂದ ಸಿಹಿ-ಬೆಲ್ಲವಲ್ಲ
ಹಿಂಡುವುದು ಹುಳಿ ನೆತ್ತರಲಿ, ಮಿತಿಯಿರಲಿ|
ಮೆಲ್ಲುವ ಪರಿಭಾಷೆ ನೀನೆಲ್ಲಿ ಬಲ್ಲೆ, ಮೃದು ಮಲ್ಲಿಗೆಯಲಿ ಹೆಣೆದ ಹೂಬಿಲ್ಲು ನೀನಿನ್ನು|
ಮೆಲ್ಲುವ ಪರಿಯ ನಾಬಲ್ಲೆ ಮಲ್ಲ, ಕೇಳಿಲ್ಲಿ!
ಕಲ್ಲು ತಿಂದು ಕರಗಿಸುವ, ನೀನಾಗಬೇಕಿದ್ದಲ್ಲಿ ಈಗಿಂದೀಗಲೇ
ಕೊಲ್ಲು ಈ 'ನೆಲ್ಲಿ'ಯ ಮೋಹ ||
ನಿಜಕೂ ತಪ್ಪಲ್ಲ! ನೆಲ್ಲಿಯನು ತಿಂಬುವುದು
ತೊಳೆದು ತಾ ನೆಲ್ಲಿಯನು ನಲ್ಲಿಯ ತಿಳಿ ನೀರಿನಲ್ಲಿ;
ತುಂಬದಕೆ ಸಮ-ಪ್ರಮಾಣದ ಉಪ್ಪು-ಖಾರದಾಗರವನು|
ಕೇಳಿಲ್ಲಿ,
ಮಿತವಿರಲಿ ತಿನಿಸಿನಲ್ಲಿ, ಹಿತವಿರಲಿ ಮನಸ್ಸಿನಲ್ಲಿ, ಹಿತ-ಮಿತ ಮತ್ತೆಲ್ಲದರಲಿ||
* * * * * * * * * * * * * * * * * * * *
ನಲ್ಲ ಬೆಳೆದು ನಲ್ಲಿಯ ಬಳಿನಿಂತು ನೆಲ್ಲಿಯನು ತೋರುತ
ನಲ್ಲೆಗೆ ಹೀಗೆಂದನು-
ಅಂದು ನನ್ನಪ್ಪನಿಂದ ಬಾಳೆಂಬ ಪಥಕೆ ಬೆಳಕು ಚೆಲ್ಲಿದ ಸದ್ಗುಣದ ನೆಲ್ಲಿಯಿದು|
ಉಪ್ಪು-ಹುಳಿ-ಖಾರ ಪ್ರಮಾಣದಲ್ಲಿ ಬೆಸೆದು ಹಿತಿಮಿತಿಯನ್ನರುಹಿದ ಸಾರವಿದು|
ಜೀವ ಭಾವ ಭೇದಗಳ ಪರಿಯ ಪರಿಚಯಿಸುವ ಜೀವನಾನ್ವಯದ ಸೊಲ್ಲಿದು|
ಕೇಳು ನನ್ನ ನಲ್ಲೆ ಇದ, ನಾ ನಿನಗೆ ತಿಳಿಪೆನು;
ನನ್ನಪ್ಪ ನನಗರುಹಿದಂತೆ!!
ಎಲ್ಲದಕೂ ಪ್ರಮಾಣವುಂಟು, ನಲ್ಲೆ ನೀನದನು ಬಲ್ಲೆಯಾ?
ಬದುಕೇ ಹೀಗೆ!
ಹೆಚ್ಚೆಂದರೆ ಕಡಿಮೆ ತುಚ್ಛವೆಂದರೆ ಘನ!
ಕಡಿಮೆಯಾದರೆ ಗ್ರಹಿಸು, ಹೆಚ್ಚಿದರೆ ನಿಗ್ರಹಿಸು|
ನೀ ಒಲ್ಲೆಯೆಂದರೂ ನಿನ್ನ ಬಿಡದು ಬದುಕು....
ನೆಲ್ಲಿಯ ಕತೆಯಲ್ಲವಿದು, ಬಾಳಿನ ವ್ಯಥೆಯು! ನೆಲ್ಲಿ ಇಲ್ಲಿ ನಿಮಿತ್ತ ಕಾಣು!
ಪ್ರಮಾಣ ಮಾಡಿ ಹೇಳುವೆ- ಕೇಳು ನನ್ನ ಹೂವೆ!
ಸಮಪ್ರಮಾಣದಲ್ಲಿ ನಿಂತಿಹುದು ಸುತ್ತಲ ಜಗವೆಲ್ಲ||
- ಎಂ.ಕೆ. ಹರಕೆ
Adbhuta
ಪ್ರತ್ಯುತ್ತರಅಳಿಸಿನೆಲ್ಲಿಕಾಯಿಯಂತಹಾ ಸಾಮಾನ್ಯ ವಿಷಯವನ್ನು ವಸ್ತುವಾಗಿಸಿ ಬರಹ ಅದೆಷ್ಟೋ ವಿಚಾರಗಳ ಕುರಿತು ವಿವರಿಸಿದಿರಿ,����ಅಭಿನಂದನೆಗಳು
ಪ್ರತ್ಯುತ್ತರಅಳಿಸಿಧನ್ಯವಾದಗಳು..
ಅಳಿಸಿ