ಸೋಮವಾರ, ಏಪ್ರಿಲ್ 13, 2020

ಮರೆಯಾದ ಮಾಣಿಕ್ಯ!!

                      "ವ್ಯರ್ಥವಾಯಿತಲ್ಲ  ಜನ್ಮವು, ಸಾರ್ಥಕಾಗಲಿಲ್ಲ" ಪುರಂದರದಾಸರ ಈ ಸಾಲನ್ನು ಕೇಳುತ್ತಾ ಕುಳಿತಿದ್ದ ಸಂದರ್ಭವದು. ಆಗಸ್ಟ್  ೧೫ ಎಂದಾಕ್ಷಣ ನಮಗೆಲ್ಲಾ ನೆನಪಾಗುವುದು ಸ್ವತಂತ್ರದಿನ. ಪ್ರತಿ ಭಾರತೀಯನು ಸ್ವಾತಂತ್ರ್ಯ ಯೋಧರ, ಹೋರಾಟಗಾರರನ್ನು ಸ್ಮರಿಸುವ ದಿನ. ಒಂದು ರೀತಿಯ ಹಬ್ಬದ ವಾತಾವರಣವೇ ಸರಿ. ಆದರೆ ನನ್ನ ಮನಸ್ಸು ಮಾತ್ರ ಆಗಸ್ಟ್ ೧೫ ಎಂದಾಕ್ಷಣ ವಿಚಲಿತವಾಗುತ್ತದೆ. ಬೇರೊಬ್ಬರ ದಾಸ್ಯಕ್ಕೆ ಒಳಗಾಗಿ ಪರತಂತ್ರವಾಗುತ್ತದೆ. ಅತ್ಯಮೂಲ್ಯ ರತ್ನವೊಂದು ವಿನಾಃ ಕಾರಣ ಕೈತಪ್ಪಿತಲ್ಲ ಎಂಬ ಕೊರಗು ಆವರಿಸುತ್ತದೆ. ಹೌದು, ಆಗಸ್ಟ್ 15, ಆ ಮಾಣಿಕ್ಯ ಹಠಾತ್ತನೆ ಮರೆಯಾದ ದಿನ.
      ಅದು ೨೦೦೨-೦೩ ರ ಇಸವಿ, ಕರ್ನಾಟಕದಲ್ಲಿ ಎಸ್.ಎಂ.ಕೃಷ್ಣರವರು ಮುಖ್ಯಮಂತ್ರಿಯಾಗಿದ್ದ ಸಮಯ. ಸುಮಾರು ೭ ವರ್ಷಗಳ ಭಾರೀ ಬರಗಾಲವು  ಉತ್ತರ ಕರ್ನಾಟಕವನ್ನು ಅಲ್ಲೋಲ  ಕಲ್ಲೋಲಗೊಳಿಸಿತ್ತು. ತಮ್ಮ ಸ್ವಂತ ಊರನ್ನು ಬಿಟ್ಟು ಅಂತರ್ ರಾಜ್ಯ, ಬೆಂಗಳೂರು, ಗೋವೆ, ಪುಣೆ ಹೀಗೆ ಮುಂತಾದ ಉದ್ಯೋಗನಗರಿಗಳಿಗೆ ನಮ್ಮ ಜನ ವಲಸೆ ಹೋಗುತ್ತಿದ್ದರು. ಬರಗಾಲ ಯಾವ ಮಟ್ಟಿಗೆ ಇತ್ತೆಂಬುದು ನಮ್ಮ ದೃಷ್ಟಿಕೋನದಲ್ಲಿ ಅಳೆಯುವುದು ಅಸಾಧ್ಯದ ಮಾತು. ಒಟ್ಟಿನಲ್ಲಿ ಬದುಕಬೇಕಾದರೆ ಪರ ಊರಿಗೆ ಹೋಗಲೇಬೇಕೆಂಬುದು ಮಾತ್ರ ನಿಶ್ಚಿತವಾಗಿತ್ತು.
                      ನಾನು ಆಗತಾನೆ ಶಾಲೆಗೆ ಸೇರಿದ್ದೆ. ನಮ್ಮ ಹಳ್ಳಿಯಲ್ಲಿ 1-5 ನೇ ತರಗತಿಯವರೆಗೆ  ನಡೆಸುವ ಪ್ರಾಥಮಿಕ  ಶಾಲೆಯಿತ್ತು. ನಾನು ೨ನೇ ವರ್ಗವಿರುವಾಗ ನನ್ನ ತಮ್ಮ ತುಂಟತನ ಮಾಡುತ್ತಿದ್ದರಿಂದ ಒಂದು ವರ್ಷ ಮುಂಚಿತವಾಗಿಯೇ ಶಾಲೆಗೆ  ಸೇರಿಸಿದರು. ಇಂತಿರುವಾಗಲೇ ನಮ್ಮ ಹೊಲದ ಮನೆಯಿಂದ ಸುಮಾರು ೧ ಮೈಲಿ ದೂರದಲ್ಲಿದ್ದ ನನ್ನ  ಸ್ನೇಹಿತರ ಮನೆಗೆ ಆಗಾಗ್ಗೆ ಹೋಗುತ್ತಿದ್ದ ನೆನಪಿದೆ. ಆ ಸ್ಥಳ ತುಂಬಾ ಹಸಿರುಮಯವಾದ ತಪಸ್ವಿಗಳ ಸ್ಥಳ. ಹೆಸರು 'ಕೂಡಲ'. ಶರಣರ ಕೇಂದ್ರವಾಗಿದ್ದರಿಂದ ಅದನ್ನು 'ಕೂಡಲಸಂಗಮ'ದಷ್ಟೇ ವಿಶೇಷವಾಗಿ ನಮ್ಮೂರಿನ  ಜನ ಭಾವಿಸಿದ್ದರು. ಇದರ ಮಾರ್ಗವಾಗಿ ಒಂದು ಹಳ್ಳ ಹರಿಯುತ್ತದೆ. ಅಲ್ಲಿ ಸುಮಾರು ಆಲದಮರಗಳು, ಬನ್ನಿ ಮರಗಳು, ನೇರಳೆ, ಈಚಲುಗಳ ಸಾಲಿವೆ. ನಾವು ಸಣ್ಣವರಿದ್ದಾಗ ಆಲದಮರಕ್ಕೆ ಜೋತುಬಿದ್ದಿರುವ  ಬಾವಲಿಗಳನ್ನು ಹಿಡಿದು ಜೋಕಾಲಿ ಆಡುವ ಮಜಾ, ಅಂತಿದ್ದಲ್ಲ......
                      ಇವು ನನ್ನ ತಂದೆಯ ಸ್ನೇಹಿತರ ಹೊಲದ ಅಂಚಿಗಿದ್ದವು. ಅವರು ಲಿಂಗಾಯತರು, ವಿಭೂತಿಯಿಂದ ತಮ್ಮನ್ನು ಆವರಿಸಿರುತ್ತಿದ್ದರು. ಹೆಸರು ಮಲ್ಲಪ್ಪ, ನನ್ನ ತಂದೆ ಮತ್ತು ಇವರ ಪರಿಚಯ ತುಂಬಾ ಹಿಂದಿನದು. ಒಂದೇ ಊರಿನವರು;  ಜತೆಗೆ ಈರ್ವರಿಗೂ ಒಬ್ಬರ ಬಳಿಯೇ ಅಧ್ಯಾತ್ಮ ದೀಕ್ಷೆ ಒಲಿದಿತ್ತು. ಊರಿನಲ್ಲಿ ಆಡಿದ 'ಮೂರು ದಿನದ ಸಂತೆ' ಎಂಬ ನಾಟಕದಲ್ಲಿ ಇಬ್ಬರು ಗಂಡ-ಹೆಂಡತಿಯಾಗಿ ಅಭಿನಯಿಸಿದ್ದರು. ಅವರ ಮನೆಯಲ್ಲಿ ಅಂದಿನ ಕಾಲಕೀರ್ತಿಗೆ ಬ್ಲಾಕ್&ವೈಟ್ ಟೀವಿ ಸಹ ಇತ್ತು. ಈ ಕಾರಣದಿಂದಲೇ ಏನೋ ನಮ್ಮಪ್ಪ ಪ್ರತಿದಿನ ಇವರ ಮನೆಗೆ ತಪ್ಪದೆ ಹೋಗುತ್ತಿದ್ದರು.
                      ಮಲ್ಲಪ್ಪ ಶರಣರಿಗೆ ಇಬ್ಬರು ಮಕ್ಕಳು. ಮಗ-ಶಿವಾನಂದ , ಮಗಳು-ಶ್ರೀದೇವಿ . ನನ್ನ ತಮ್ಮ ೧ನೇ, ನಾನು ೨ನೇ, ಶ್ರೀದೇವಿ ಮೂರನೇ ಹಾಗೂ ಶಿವಾನಂದ ೪ನೇ ಕ್ಲಾಸಿನಲ್ಲಿ ಕ್ರಮೇಣವಾಗಿ ಓದುತ್ತಿದ್ದೆವು. ಒಂದು ದಿನ ಶಾಲೆಯಲ್ಲಿ ನಾಡಗೀತೆ ಹಾಡುವಾಗ ಎಲ್ಲರೂ ತಪ್ಪಿ ನಿಲ್ಲಿಸಿದಾಗ ನಾವಿಬ್ಬರೂ(ನಾನು-ಶಿವಾನಂದ) ನಿಲ್ಲಿಸದೇ ಹಾಡುತ್ತಿದ್ದಾಗ  ನಮ್ಮ ಗುರುಗಳು ನಮ್ಮಿಬ್ಬರನ್ನೂ ಗಮನಿಸಿ ಪ್ರಶಂಶಿಸಿದ ಕ್ಷಣ ಇನ್ನೂ ನೆನಪಿದೆ. [ನಮಗೆ ಪೂರ್ಣ ನಾಡಗೀತೆ ಹಾಡಿಸುವ ಕ್ರಮವಿತ್ತು]. ಶಿವಾನಂದ ಅತ್ಯಂತ ಪ್ರತಿಭಾವಂತ; ಎಲ್ಲದರಲ್ಲೂ ಮುಂದಿದ್ದ. ಓದು, ಚಿತ್ರಕಲೆ, ಆಟೋಟ ಹೀಗೆ ಪ್ರತಿಯೊಂದರಲ್ಲೂ ಉತ್ಸಾಹಪೂರ್ಣನಾಗಿ ಬೆರೆಯುತ್ತಿದ್ದ. ಒಮ್ಮೆ ತನ್ನ ತಂಗಿಯನ್ನು ಯಾರೋ ರೇಗಿಸಿದಕ್ಕೆ ಓಡಿಸಿಕೊಂಡು ಹೋಗಿ ತಾಕೀತು ಮಾಡಿದ ಘಳಿಗೆ ಮರೆಯುವಂತದಲ್ಲ.
                      ಅವರ ಹೊಲದಲ್ಲಿ ದ್ರಾಕ್ಷಿಯನ್ನು ಬೆಳೆದಿದ್ದರು. ಪ್ರತಿದಿನ ಒಟ್ಟಿಗೆ ಕುಳಿತು ಅಭ್ಯಸಿಸುತಿದ್ದೆವು. ಶಿವಾನಂದನಿಗೆ ನನ್ನನ್ನು ಕಂಡರೆ ಅಪಾರ ಪ್ರೀತಿ, ನನಗೂ ಅದೇನೋ ಗೌರವ,ವಾತ್ಸಲ್ಯ. ಮನೆಯಲ್ಲಿ ಯಾವುದೇ ಸಂತೆ, ಅದು-ಇದೂ ಏನೇ ಹೇಳಲಿ ನನ್ನನ್ನು ಜೊತೆಗೆ ಕರೆದೊಯ್ಯುವ ಹಂಬಲ ಆತನದು. ರಾಜ್ಯದ ಹಲವೆಡೆ ಭೀಕರ ಬರಗಾಲವಾಗಿತ್ತು, ಕೃತಕ ಮೋಡ ಬಿತ್ತನೆ (Artificial cloud seeding by silver iodide) ಹೆಲಿಕಾಪ್ಟರ್ನಿಂದ ನಡೆಯುತ್ತಿತ್ತು. ಈ ದೃಶ್ಯಗಳು ಉದಯವಾರ್ತೆಗಳಲ್ಲಿ ಪ್ರಸಾರವಾಗುತ್ತಿದ್ದವು.
                      ನಾನು ಪ್ರತಿದಿನ ನನ್ನ ತಂದೆಯ ಆಧ್ಯಾತ್ಮ ಗುರುಗಳ ಮನೆಗೆ ಹಾಲು ಕೊಟ್ಟು ಬರುತ್ತಿದ್ದೆ. ನಮ್ಮ ಹೊಲದಲ್ಲಿ ನಿಂಬೆಯನ್ನು ಬೆಳೆದಿದ್ದೆವು. ಬರಗಾಲದಿಂದ ತತ್ತರಿಸಿಸಿದ ವೇಳೆಯಲ್ಲೇ , ನನ್ನ ಅಪ್ಪ-ಅವ್ವ ಇಬ್ಬರೂ ಜತೆಗೂಡಿ ಬಾವಿಯಿಂದ ನೀರು ಹೊತ್ತು ಸಸಿಗಳನ್ನು ಪೋಷಿಸಿದ್ದರು. ದಿನಾಲೂ ಶಾಲೆಗೆ ತಪ್ಪದೇ ಹಾಜರಾಗಬೇಕಿತ್ತು, ಆಗುತ್ತಿದ್ದೆವೂ ಸಹ. ಒಂದು ದಿನ ಶಾಲಾಕೈಬೋರಿನಿಂದ ನೀರು ಕುಡಿಯುವಾಗ ನನ್ನ ಕೈಬೆರಳು ಬೋರ್ವೆಲ್  ನಡುವಲ್ಲಿ ಸಿಕ್ಕು, ತೋರುಬೆರಳು ಅಪ್ಪಚ್ಚಿಯಾಯಿತು. ಅದಕ್ಕೆ ಕಾರಣೀಭೂತಳಾದವಳು 'ಅಕ್ಕ ಶ್ರೀದೇವಿ'. ಆಕೆಯದು ಸಹ ಕೈಮೊಂಡಾಗಿತ್ತು; ಚಿಕ್ಕ ವಯಸ್ಸಿನಲ್ಲಿ ತೊಟ್ಟಿಲಲ್ಲಿ ಆಡುವಾಗ ವಿದ್ಯುತ್ ಸ್ಪರ್ಷಿಸಿದರಿಂದ ಹೀಗಾಗಿತ್ತು. "ನಿನ್ನದು  ಮೊದಲೇ ಕೈಮೊಂಡು, ಈಗ ನಿನ್ ಲಿಸ್ಟ್ಗೆ ಅವ್ನು ಸೇರ್ಸ್ಕೊಂಡಿಯಾ?"-ಎಂದು ಶಿವಾನಂದ ತನ್ನ ತಂಗಿಯನ್ನು ಬೈಯುತ್ತಿದ್ದ.
                        ಹೀಗಿರುವಾಗ ಒಮ್ಮೆಲೇ ನಮ್ಮ ಈ ಎರಡು ಕುಟುಂಬಗಳು ಬೆಂಗಳೂರಿಗೆ ವಲಸೆ ಬರಲು ನಿರ್ಧರಿಸಿದವು. ಈ ನಿರ್ಣಯ ಅದೊಂದು ರಾತ್ರಿಯಲ್ಲಿ ನಿರ್ಣಯವಾದತ್ತಿಂತ್ತು. ಮನೆಯಲ್ಲಿದ್ದ ದನ-ಕರು, ಕುರಿಮರಿ, ಕೋಳಿ ಎಲ್ಲವನ್ನೂ ನಾಲ್ಕಾರು ಕಾಸಿಗೆ ಮಾರಿ ಹೊಸದಿಕ್ಕಿನತ್ತ ಪಯಣ ಬೆಳೆಸಿದ್ದೆವು. ಸುಮಾರು ೪ ಗಂಟೆ ಮುಂಜಾವಿನಲ್ಲಿ  ಎಲ್ಲಾ ಸರಕು-ಸಾಮಗ್ರಿಗಳನ್ನು ಪ್ಯಾಕ್ ಮಾಡಿ, ಬೆಳಗು ಹರಿಯುವ ಮೊದಲೇ ಕಾಜಿಬೀಳಗಿ ಮಾರ್ಗವಾಗಿ ಬಿಜಾಪುರ ತಲುಪಿದ್ದೆವು. ಮೊದಲ ಬಾರಿ VRL ಬಸ್ಸನ್ನು ಹತ್ತಿದ ನೆನಪು. ನನ್ನನ್ನು-ತಮ್ಮನನ್ನು ಸೀಟಿನ ಕೆಳಭಾಗದಲ್ಲಿ ಮಲಗಿಸಿದ್ದರು. ನಾವು ಕಣ್ಬಿಡುವ ಮೊದಲೇ ಸಿಲಿಕಾನ್ ಸಿಟಿಗೆ ಕಾಲಿಟ್ಟಿದ್ದೆವು. ಟ್ರ್ಯಾಕ್ಟರ್ನಲ್ಲಿ ನಾವು ನೆಲೆಸಲು ಬಂದಿದ್ದ ಸ್ಥಳಕ್ಕೆ ಕರೆದೊಯ್ದರು. ಅದು ಕೆಂಗೇರಿ ಮಾರ್ಗವಾಗಿ ಬರುವ ರಾಮೋಹಳ್ಳಿ ಸಮೀಪದ ಲಕ್ಕಯ್ಯನ ಪಾಳ್ಯ ಗ್ರಾಮ. ಸುಮಾರು ೫೦ ಎಕರೆ ತೆಂಗಿನತೋಟದಲ್ಲಿ ನಮ್ಮ ವಾಸ್ತವ್ಯ..
                        ನಾವು ಬೆಂಗಳೂರಿಗೆ ಬಂದು ೪ ತಿಂಗಳಾದರೂ ನಮ್ಮ ವರ್ಗಾವಣೆ ಪತ್ರ ಬರಲೇ ಇಲ್ಲ. ಆದರೂ ಶಾಲೆಗೇ ಹೋಗೆಹೋಗುತ್ತಿದ್ದೆವು. ಮೊದಲ ದಿನವೇ ನಮ್ಮನ್ನು ತುಂಬಾ ವಿಶೇಷವಾಗಿ ಬರಮಾಡಲಾಯಿತು. ಗುರುಗಳು ನಮ್ಮ ಕಲಿಕೆಯ ಬಗ್ಗೆ ವಿಚಾರಿಸುತ್ತಾ "ಎಲ್ಲಿಯವರೆಗೆ ಮಗ್ಗಿ ಕಲಿತಿದ್ದೀರಿ?" ಎಂದು ಪ್ರಶ್ನಿಸಿದರು. ಅದಕ್ಕೆ ಶಿವಾನಂದ ೪೦ರವರೆಗೆ ಬರುತ್ತೆ ಸರ್ ಎಂದ; ನಾನಿದ್ದವನು "ಸರ್ ರೀ,ನಂಗ ೩೨ರ ಮಟ್ಟ ಅಷ್ಟ ಬರ್ತಾವ್ರಿ " ಅಂದೆ. ಏಕೋ ವಾತಾವರಣ ಗಲಿಬಿಲಿಗೊಂಡಂತೆ ಕಂಡಿತು. "ನಾನು ಅಂಕಿಗಳನ್ನಲ್ಲ ಕೇಳ್ತಿರೋದು,ಎರಡೊಂದ್ಲಾ ಎರಡು ಮಗ್ಗಿ" ಎಂದು ಪುನಃ ಮತ್ತೊಮ್ಮೆ ಪ್ರಶ್ನಿಸಿದರು. ಹೌದು ಸರ್ ಅದೇ ನಾವೂ ಹೇಳ್ತಿರೋದು ಎಂದು ಉತ್ತರಿಸಿದೆವು. (ಉತ್ತರಕರ್ನಾಟಕದ ಶಾಲೆಗಳಲ್ಲಿ ೩೦ರವರೆಗೆ ಮಗ್ಗಿ ಕಡ್ಡಾಯವಾಗಿರುತ್ತದೆ; ಆದರೆ ಬೆಂಗಳೂರಿನ  ಶಾಲೆಗಳಲ್ಲಿ ಇದು ೨೦ಕ್ಕೆ ಸೀಮಿತವಾಗಿತ್ತು). ನಾನು ಕೇವಲ ಎರಡನೇ ವರ್ಗದಲ್ಲಿಯೇ ಮೂವತ್ತು ರವರೆಗೆ ಮಗ್ಗಿಯನ್ನು ಉತ್ಸಾಹ ಪೂರ್ಣವಾಗಿ ಕಲಿತಿದ್ದೆ . ನಮ್ಮಲ್ಲಿ ಹಿರಿಯರ ಮುಂದೆ ಮಗ್ಗಿಯನ್ನು ಉಲ್ಟಾ ಸೀದಾ ತಪ್ಪಿಲ್ಲದಂತೆ ಹೇಳುವುದು ನಮ್ಮ ಕೌಶಲ್ಯಕ್ಕೆ ಹಿಡಿದ ಕೈಗನ್ನಡಿಯಂತೆ ಅಂದು ನಮಗೆ ಭಾಸವಾಗುತ್ತಿತ್ತು .
                ಮೊದಲನೇ ದಿನವೇ ನಾವು ಸಂಪೂರ್ಣ ಪರಿಚಿತರಾಗಿ ಬಿಟ್ಟೆವು. ಶಿವಾನಂದನು ಐದನೇ ವರ್ಗ, ಅವನಿಗೆ ಇಂಗ್ಲಿಷ್ ,ಸಮಾಜ ಎಂಬ ಎರಡು ಹೆಚ್ಚಿನ ವಿಷಯಗಳು ಬಂದಿದ್ದವು. ಅವನು ನೈಸರ್ಗಿಕವಾಗಿ ವಾತಾವರಣವನ್ನು ನೋಡಿ ಹೋಲಿಸಿ ಪಠ್ಯವನ್ನು ಕಲಿಯುತ್ತಿದ್ದ. ಐವತ್ತು ಎಕರೆ ತೋಟ ಬಿಟ್ಟರೆ ಆ ಪುಟ್ಟ ಗ್ರಾಮವಷ್ಟೇ ನಮಗೆ ಆಗ... ಸುಮಾರು ಐದರಿಂದ ಆರು ಕುಟುಂಬಗಳು ತೋಟದಲ್ಲಿದ್ದು ಎಲ್ಲರಿಗೂ ವಸತಿ ಸೌಲಭ್ಯವೂ ಇತ್ತು. ಶಿವಾನಂದನ ಮನೆಯು ಯಜಮಾನರ ಮುಖ್ಯ ಕಟ್ಟಡದ ಹತ್ತಿರವಿದ್ದುದರಿಂದ ಪ್ರತಿದಿನ ಬೆಳಗ್ಗೆ ರಂಗೋಲಿಯನ್ನು ಅವನೇ  ಹಾಕುತ್ತಿದ್ದನು. ಹೆಣ್ಣು ಮಕ್ಕಳು ನಾಚುವಂತೆ ರಂಗೋಲಿಯಲ್ಲಿ ಅಕ್ಷರ ಬರೆಯುತ್ತಿದ್ದನು.. ಬಸವಣ್ಣನ ವಚನಗಳನ್ನು ಮನನ ಮಾಡಿ ಹೇಳುತ್ತಿದ್ದನು. ಈ ಎಲ್ಲಾ ವಿಚಾರಗಳು ತೋಟದ ಯಜಮಾನನಿಗೆ ಅಚ್ಚುಮೆಚ್ಚು ಹಾಗಾಗಿ ಅವನಿಗೆ ಬಹುಮಾನವಾಗಿ ಪ್ರೋತ್ಸಾಹ ಧನ ಸಲ್ಲುತ್ತಿತ್ತು..
                  ಒಂದು ದಿನ ನಾನಾರೀತಿಯ ಸಸ್ಯ, ಗಿಡ-ಮರಗಳು, ಹೂ-ಹಣ್ಣುಗಳ ಪಟ್ಟಿ ಮಾಡುವ ಚಟುವಟಿಕೆ ನೀಡಿದ್ದರು. ಶಿವಾನಂದನು ನಮ್ಮೆಲ್ಲರನ್ನು ಕರೆದೊಯ್ದು, ಪಟ್ಟಿ ಮಾಡಲಾರಂಭಿಸಿದನು.. ಎಲ್ಲ ಮುಗಿದು ಮನೆ ಸೇರುವುದು ಸಂಜೆಯಾಗಿತ್ತು. ಮನೆಗೆ ಬಂದೊಡನೆ ವಿಶೇಷವಾಗಿ ಬೆತ್ತಪೂಜೆ ನಡೆಯುತ್ತದೆ.. ಅವರಪ್ಪ ಬಾಸುಂಡೆ ಬರೋ ಹಾಗೆ ಬಡಿದಿದ್ದರು. ನನಗೆ ಅದನ್ನು ಕಂಡು ಮರುಕ ಹುಟ್ಟಿತ್ತು; ಆದರೆ ಅವನಿಗದು ಅಗಣನೀಯ, ತಾನು ಸುತ್ತಿ ಪಟ್ಟಿ ತಯಾರಿಸೆದನಲ್ಲ ಎಂಬ ಸಂತಸ..ಅವನ ಗಟ್ಟಿತನ, 'passion towards his work' ಪ್ರತಿಯೊಬ್ಬರನ್ನು ಹುರಿದುಂಬಿಸುವಂತಿತ್ತು...
                    ನನಗೆ ಇನ್ನೂ ನೆನಪಿರುವಂತೆ, ಅವನದು ಮುತ್ತು-ರತ್ನದಂತಹ ಬರೆವಣಿಗೆ. ಅದರಲ್ಲೂ ಕನ್ನಡವನ್ನು ಮುತ್ತ ಪೋಣಿಸಿದ ಹಾಗೆ ಹೊತ್ತಿಗೆಯ ಪುಟಗಳಲ್ಲಿ ಹರಡುತ್ತಿದ್ದನು. ಒಮ್ಮೆ ತನ್ನ ಶಾಲೆಯಲ್ಲಿ(ಕೇತೋಹಳ್ಳಿ) ಕೃಷ್ಣನ ಚಿತ್ರವನ್ನು ತನ್ನ ಕುಂಚದಲ್ಲಿ ಅರಳಿಸಿದ್ದನು... ಆ ಚಿತ್ರವನ್ನು ಕೆಲವು ವರ್ಷಗಳ ಕಾಲ ಶಾಲಾ ತರಗತಿಯಲ್ಲಿ ನೇತುಹಾಕಿದ್ದನ್ನು ನಾ ನೋಡಿದ್ದೆ.. ಕ್ರಿಕೆಟ್ ಆಟ ಆಡುವ ಆಕರ್ಷಣೆ ಅವನಿಂದಲೇ ಹುಟ್ಟಿದ್ದು.. ಕೆಲ ತಿಂಗಳುಗಳ ನಂತರ ಅವರ ಕುಟುಂಬ 50 ಎಕರೆ ಬೃಹತ್ ತೋಟ ಬಿಟ್ಟು, ಒಂದೆರಡು ಮೈಲಿ ದೂರದಲ್ಲಿದ್ದ 'ದಿ ಬ್ಯಾನಿಯನ್ ಕೌಂಟಿ' ಎಂಬಲ್ಲಿ ಬೀಡು ಬಿಟ್ಟಿತು.. ಅಲ್ಲಿ ಸ್ವಿಮ್ಮಿಂಗ್ ಫೂಲ್ನಲ್ಲಿ ಪ್ರಥಮ ಬಾರಿಗೆ ನೀರಲ್ಲಿ ಆಟವಾಡಿ ಸಂಭ್ರಮಿಸಿದ ಕ್ಷಣಗಳು, ಹಸಿರಾದ ಗರಿಯ ಮೇಲೆ ಕ್ರಿಕೆಟ್ ಆಡುತ್ತಿದ್ದ ನೆನಪುಗಳು ಅಚಲವಾಗಿ ಕಣ್ಣಿನಲ್ಲೇ ಸೆರೆಯಾಗಿವೆ.. ಅಲ್ಲಿನ ವಿದೇಶಿ ಸಂಸ್ಕೃತಿ ನನ್ನನ್ನು ಮೂಕವಿಸ್ಮಿತಗೊಳಿಸಿತ್ತು...
                      ಆ ವೇಳೆಗಾಗಲೇ ನಾವು ಒಂದೆಡೆ ನೆಲೆ ನಿಲ್ಲಲು ಪರದಾಡುವಂತಾಗಿತ್ತು. ಕೇವಲ ಎರಡು ವರ್ಷಗಳ ಅವಧಿಯಲ್ಲಿ 2-3 ಶಾಲೆ ಬದಲಾಯಿತು.. ರಾಮೋಹಳ್ಳಿಯ ಬೃಹತ್ ನಾಗದೇವಾಲಯದ ಪ್ರಾರಂಭಿಕ ಕಟ್ಟಡ ನಿರ್ಮಾಣ ಹಂತದಲ್ಲಿ ನಾವೂ ಭಾಗಿಯಾಗಿದ್ದೆವು. ಆನಂತರ ದೊಡ್ಡ ಆಲದ ಮರದ ಒಂದು ಎಸ್ಟೇಟ್ಗೆ ಬಂದ ನೆನಪಿದೆ. ಇಂತಿರುವಾಗಲೇ ಶಿವಾನಂದರ ಕುಟುಂಬ ತುಮಕೂರಿನ ಒಬ್ಬರ ತೋಟಕ್ಕೆ ವರ್ಗವಾಯಿತು. ಆದರೆ ಶ್ರೀದೇವಿ-ಶಿವಾನಂದರ ಪರೀಕ್ಷೆ ಮುಗಿದಿರಲಿಲ್ಲ.. 2-3 ತಿಂಗಳು ಅವರ ತೋಟದ ಮಾಲೀಕರ ತಂದೆಯ ಮನೆಯಲ್ಲಿ (ದೊಡ್ಡಾಲ ಮರದ) ಉಳಿದು ನಂತರ ತುಮಕೂರು ಸೇರಿದರು..
                         ಅವರು ತುಮಕೂರಿಗೆ ಹೋಗಿದ್ದೆ, ಹೋಗಿದ್ದು; ಹತ್ತಿರವಾಗಿದ್ದವರು ಕ್ರಮೇಣ ಅಪರೂಪವಾದರು.. ಅವರು ಸಿದ್ಧಗಂಗಾ ಕ್ಷೇತ್ರದಿಂದ ಸುಮಾರು ಆರೇಳು ಕಿ.ಮೀ ದೂರದಲ್ಲಿರುವ, ಕ್ಯಾತ್ಸಂದ ಮಾರ್ಗವಾಗಿ ಬರುವ ಒಂದು ಎಸ್ಟೇಟ್ನಲ್ಲಿದ್ದರು.. ವಾಸಿಸಲು ಯೋಗ್ಯವಾದ 2 ಕೊಠಡಿಗಳು ಹಾಗೂ ಒಂದು ದನದ ಕೊಠಡಿಯೂ ಸಹ ಇತ್ತು. ಕೇವಲ ಎರಡು ಎಕರೆ ಜಮೀನು, ಸೊಗಸಾದ ಪರಿಸರದಲ್ಲಿ ಇವರ ಜೀವನ ಸಾಗುತ್ತಿತ್ತು. ಒಳಕೊಠಡಿಯಲ್ಲಿ ಅಣ್ಣ-ತಂಗಿಯರು ಓದಲು ಮಾಡಿಕೊಂಡಿದ್ದ ಜಾಗ ಅದ್ಭುತ.. ತಮ್ಮಲ್ಲಿದ್ದ, ಕೈಗೆಟಕುವ ಸಾಮಗ್ರಿಗಳಿಂದಲೇ ಮೇಜು, ಖುರ್ಚಿಗಳಂತಹ ವಸ್ತುಗಳನ್ನು ನಿರ್ಮಿಸಿದ್ದರು..
                          ಶಿವಾನಂದಣ್ಣ ಅಲ್ಲಿಗೆ ಹೋದಾಗ ಬಹುಶಃ7ನೇ ತರಗತಿ, ಅವರ ಹೊಲದ ಯಜಮಾನರೇ ಇವನ ಓದಿನ ಶ್ರದ್ಧೆ ಕಂಡು ಇವನಿಗೆ ಓದಿಗೆ ಬೇಕಾದ ಎಲ್ಲಾ ಖರ್ಚನ್ನು ಭರಿಸಿದ್ದರು.. ಅಂದಿನ ದಿನಮಾನಗಳಲ್ಲೇ ಅವನನ್ನು 14 ಸಾವಿರ ಡೊನೇಷನ್ ಕಟ್ಟಿ ಆಂಗ್ಲಮಾಧ್ಯಮ ಶಾಲೆಗೆ ದಾಖಲು ಮಾಡಿದ್ದರು. ಆಗ ನಮ್ಮ ತಂದೆ-ತಾಯಿಯರಿಗೆ ನೀಡುತ್ತಿದ್ದ ಸಂಬಳವೇ ಮಾಸಿಕ 3-4 ಸಾವಿರವಾಗಿರುತ್ತಿತ್ತು. ಅಂದರೇ ಆ ಡೊನೇಷನ್ ನಮ್ಮಂಥ ಬಡಕೂಲಿಕಾರ್ಮಿಕರಿಗೆ 4 ತಿಂಗಳು ದುಡಿದು ಸಂಪಾದಿಸುವ ಹಣ. ಈ ರೀತಿಯಾಗಿ ಈ ಕುಟುಂಬ ತುಮಕೂರಿನಲ್ಲಿ ಬೀಡು ಬಿಟ್ಟಿತು. ಆ ಸಂದರ್ಭದಲ್ಲೇ ನನ್ನ ಕುಟುಂಬ ದೊಡ್ಡಾಲಮರವನ್ನು ಬಿಟ್ಟು ಕಟ್ಟಕಡೆಗೆ ತಾವರೆಕೆರೆಗೆ ಬಂದು ನೆಲೆಯೂರಿತು. ಮುಂದೆ ಇದೇ ಊರಿನಲ್ಲಿ ನನ್ನ ಮಾಧ್ಯಮಿಕ ಶಿಕ್ಷಣ (4-7) ಪೂರ್ಣಗೊಳ್ಳುತ್ತದೆ.. 
                           ನನ್ನ ಬುದ್ಧಿಗೆ ತಿಳಿದಂತೆ, ಆ ಕುಟುಂಬ ತುಮಕೂರಿಗೆ ಹೋದ ಬಳಿಕ ಸುಮಾರು ಐದಾರು ಬಾರಿ ನಾವು ಅವರು ಪರಸ್ಪರ ಭೇಟಿಯಿತ್ತಿರಬಹುದು. ನಾನು ಕಡೆಯ ಭಾರಿ ಅವರಿದ್ದ ಆ ಊರಿಗೆ ಹೋಗಿದ್ದು ಸ್ಪಷ್ಟವಾಗಿ ನೆನಪಿದೆ. ಕಾರಣ ಇಷ್ಟೇ, ಸಹೋದರಿ ಶ್ರೀದೇವಿ ಅಕ್ಕನವರ ಧಾರ್ಮಿಕ ಕ್ರಿಯೆಗಾಗಿ. ಒಂದೆರಡು ದಿನಗಳ ಕಾಲ ಅಲ್ಲೇ ಇದ್ದ ನೆನಪು. ಧಾರ್ಮಿಕ ವಿಧಿ ವಿಧಾನಗಳೆಲ್ಲವೂ ನೆರವೇರಿದ್ದವು. ಅಂದು ದೂರದರ್ಶನದಲ್ಲಿ ನೋಡಿದ ಎರಡು ವಿಚಾರಗಳು ಇನ್ನೂ ನೆನಪಿದೆ; 
●ಅಂದಿನ ಪ್ರಧಾನಿ 'ಮನಮೋಹನ್ ಸಿಂಗ್' ಸತತ  ಎರಡನೇ ಬಾರಿ ಪ್ರಧಾನಿಯಾಗಿ ಆಯ್ಕೆಗೊಂಡು ಗಿನ್ನಿಸ್ ದಾಖಲೆ ಸೃಷ್ಟಿಸಿದ್ದರು. 
●ಕೊನೆಯ ಎಸೆತದಲ್ಲಿ ಮುಂಬೈ ಇಂಡಿಯನ್ಸ್ ಗೆಲ್ಲಲು 2 ರನ್ ಅವಶ್ಯವಿದ್ದಾಗ ಕಿಂಗ್ಸ್ ಪಂಜಾಬ್ ನ ನಾಯಕ 'ಯುವರಾಜ್ ಸಿಂಗ್', ಜಾಂಟಿ ರೋಡ್ಸ್ ಶೈಲಿಯಲ್ಲಿ ವಿಕೆಟ್ಗೆ ಎಗರಿ ಎದುರಾಳಿ ತಂಡದ ಆಟಗಾರನನ್ನು ರನೌಟ್ ಬಲೆಗೆ ಕೆಡವಿ, ತನ್ನ  ತಂಡ ಒಂದು ರನ್ನಿಂದ ಗೆಲ್ಲಲು ಸಹಕಾರಿಯಾಗಿದ್ದರು..
                         ಇದಕ್ಕೂ ಮುನ್ನ ಒಮ್ಮೆ ಅವರ ಕುಟುಂಬ ಸದಸ್ಯರೆಲ್ಲರೂ ನಾವಿದ್ದ ಮೇಟಿಪಾಳ್ಯದ ತೋಟಕ್ಕೆ ಆಗಮಿಸಿದ್ದರು. ಕಾರಣ ಅಸ್ಪಷ್ಟವಾಗಿದ್ದರೂ, ಅವರೊಂದಿಗೆ ಕಳೆದ ಆ ಘಳಿಗೆ, ಕೆಲ ಘಟನೆಗಳು ಇನ್ನೂ ನನ್ನ ಸ್ಮೃತಿ ಪಟಲದಲ್ಲಿ ಅಚ್ಚಳಿಯದೇ ಸೆರೆಯಾಗಿವೆ. ಅಂದಿನ ದಿನಮಾನಗಳಲ್ಲಿ ನನಗೆ ಹಾಗೂ ನನ್ನ ತಮ್ಮನಿಗೆ ಕ್ರಿಕೆಟ್ ಎಂದರೆ ಊಟ, ನೀರು, ಆಹಾರ ಎಲ್ಲಾ!! ಇಬ್ಬರೇ ಇದ್ದರೂ ಆಡುತ್ತಿದ್ದೆವು. ಅಂದು ನಾವೇ ತಯಾರಿಸಿದ್ದ ತೆಂಗಿನ ಬ್ಯಾಟ್ನಲ್ಲಿ ಆತನೊಡಗೂಡಿ ಕ್ರಿಕೆಟ್ ಆಡಿದ್ದೆವು. ನಾವಿದ್ದ ತೋಟದ ಮುಂಭಾಗದ ಬೀಳಿನಲ್ಲಿ(ಅದೇ ಜಾಗ ಪ್ರಸ್ತುತ 30-40 ಲಕ್ಷಕ್ಕೆ ಬಿಕರಿಯಾಗುವ ನಿವೇಶನಗಳಾಗಿ ಮಾರ್ಪಾಟಾಗಿದೆ) ಆಡುತ್ತಿದ್ದೆವು. ತಾನು ತುಮಕೂರಿಗೆ ಹೋಗಿದ್ದು, ಅಲ್ಲಿ ಹೆಚ್ಚು ಸಮಯ ಕ್ರಿಕೆಟ್ ಆಡಲು ಅವಕಾಶ ಸಿಗದೆ ಇದ್ದರೂ, ಇನ್ನೂ ಕೇತೋಹಳ್ಳಿಯಲ್ಲಿ ಆಡಿ ಬೆಳೆದ ಕ್ರಿಕೆಟ್ ಮರೆತಿಲ್ಲವೆಂಬಂತೆ ಕಡೆಯ ಇನ್ನಿಂಗ್ಸ್ನಲ್ಲಿ ಬೌಂಡರಿ ಆಟವಾಡುವ ಮೂಲಕ ಗಮನ ಸೆಳೆದಿದ್ದ ಶಿವಾನಂದ! ರಾತ್ರಿಯ ವೇಳೆ ಊಟದ ಸಮಯ ಅವರೇ ಮೊಸರನ್ನು ತಂದಿದ್ದರು ಅನ್ಸುತ್ತೆ, ಅದು ಮಂಜುಗೆಡ್ಡೆಯ ರೀತಿ ಗಟ್ಟಿಯಾಗಿ ಶೇಖರಣೆಯಾಗಿತ್ತು. ಅದನ್ನು ಹೇಗೆ ಅಲ್ಲಾಡಿಸಿ, ದ್ರವರೂಪಕ್ಕೆ ಪರಿವರ್ತಿಸಿ ಸೇವಿಸುವುದು? ಎಂಬುದನ್ನು ಯೋಚಿಸುತ್ತಾ ಬಾಯಿ ಬಿಟ್ಕಂಡು ಕುಳಿತ್ತಿದ್ದೆವು. ಕಡೆಗೆ ಅಮ್ಮ ಕೈಯಿಂದಲೇ ಅದನ್ನು ಶೇಕ್ ಮಾಡಿ ಊಟಕ್ಕೆ ಬಡಿಸಿದ್ದರು. ಅಲಲೇ ಅನುಭವವಿದ್ದರೆ ಚಮಚದ ಅವಶ್ಯಕತೆಯಿಲ್ಲ ಎಂಬುದು ಮನವರಿಕೆಯಾಯಿತು.. 
                       ಮನೆಯಲ್ಲಿ ನಾನು ಬೆಳಿಗ್ಗೆ ಬೇಗ ಏಳದಿದ್ದಾಗ ಸರ್ವೇಸಾಮಾನ್ಯವಾಗಿ ಕೇಳಿ ಬರುತ್ತಿದ್ದ ಕೆಲಮಾತುಗಳಿದ್ದವು. "ಶಿವಾನಂದ ಪ್ರತಿನಿತ್ಯ ನಾಲ್ಕು ಗಂಟೆಗೆ ಎದ್ದು , ಸ್ನಾನಾದಿಗಳನ್ನು ಮುಗಿಸಿ ಮನೆಯಿಂದ ಬೈಸಿಕಲ್ನಲ್ಲಿ ಸುಮಾರು 8-10 ಕಿ.ಮೀ ಸಂಚರಿಸಿ ಮನೆಪಾಠಕ್ಕೆ ಹೋಗುತ್ತಾನೆ, ನಂತರ ಪುನಃ ಸೈಕಲ್ನಲ್ಲೇ ಹಿಂದಿರುಗುತ್ತಾನೆ. ನೀವು ಎದ್ದು ಅಷ್ಟು ದೂರ ಸೈಕಲ್ ಸವಾರಿ ಮಾಡುವುದಿರಲಿ, ಕಣ್ಣೇ ಬಿಡಲ್ವಲ್ಲ".  ಅದೇಕೋ ಈ ಮಾತುಗಳು ನನ್ನನ್ನು ಬಹಳಷ್ಟು ದಿನಗಳ ಕಾಲ ಮುಜುಗರ, ನಾಚಿಕೆಗೇಡಾಗುವಂತೆ ಮಾಡಿದ್ದವು. ಆದರೆ ನನ್ನನು ಶಿವಾನಂದನಿಗೆ ಹೋಲಿಸಿ ಬೈಯುತ್ತಿದ್ದು ನನಗ್ಯಾವತ್ತು ಬೇಸರ ತರಲಿಲ್ಲ. ಅವನ ಪ್ರತಿನಿತ್ಯದ ಆ ಶ್ರಮವನ್ನು ನಾನು ಮನಸ್ಸಲ್ಲೇ ಶ್ಲಾಘಿಸುತ್ತಿದ್ದೆನಾದ್ರೂ ಆ ಬೈಗುಳವನ್ನು ಛಲದಿಂದ ಸ್ವೀಕರಿಸಿ ಬೆಳಿಗ್ಗೆ ಬೇಗ ಏಳಬೇಕೆಂಬ ನಿಲುವನ್ನು ಬೆಳೆಸಿಕೊಳ್ಳಲೇ ಇಲ್ಲ. ಹಾಗೆ ಮಾಡಿದ ನಿರ್ಧಾರವೊಮ್ಮೆ 3 ದಿನಗಳಿಗೆ ಸೀಮಿತಗೊಂಡು ಮುಂದೆ ಸಾಗಲಿಲ್ಲ..       
             ಹೀಗಿರುವಾಗ, ಆತನ ಶಿಕ್ಷಣ ಸಹ ಮೆಟ್ರಿಕ್ ಹಂತ ತಲುಪಿತ್ತು. 10ನೇ ವರ್ಗದ ಪರೀಕ್ಷೆಯಲ್ಲಿ ಆತ ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದ. ತಂದೆ ತಾಯಿ ಮನೆ ಮಂದಿಗೆಲ್ಲಾ ಹಿಗ್ಗೇ-ಹಿಗ್ಗು. ಮುಂದೆ ಡಿಪ್ಲೊಮಾ ಮಾಡಲು ನಿರ್ಧರಿಸಿದ. ತಾನು 1 ರಿಂದ 10 ರವರೆಗೆ ಕಲಿತ ಎಲ್ಲಾ ಶಿಕ್ಷಣ ಸಂಸ್ಥೆ ಶಾಲೆಗಳಿಂದ ಸ್ಟಡಿ ಸರ್ಟಿಫಿಕೇಟ್ ಹೊತ್ತೊಯ್ಯಬೇಕಿತ್ತು. ಇದಕ್ಕಾಗಿಯೇ ಅಪ್ಪನೊಡಗೂಡಿ ನೆಲಮಂಗಲ ಮಾರ್ಗವಾಗಿ ತಾವರೆಕೆರೆಗೆ ಬಂದಿದ್ದರು. ಅಲ್ಲಿಂದ ಕೇತೋಹಳ್ಳಿಗೆ ತೆರಳಿ ತಮ್ಮ ಎಲ್ಲಾ ದೃಢೀಕೃತ ಪತ್ರಗಳನ್ನು ಬರೆಸಿಕೊಂಡು ನಮ್ಮ ಮನೆಗೆ ಆಗಮಿಸಿದ್ದರು. ಅಂದೂ ಸಹ ಅವನಲ್ಲಿ ಉತ್ಸಾಹ ಎಂದಿನಂತೆ ಮನೆ ಮಾಡಿತ್ತು. ತನ್ನ ಶಿಕ್ಷಣ, ಮುಂದಿನ ದಾರಿ ಮುಂತಾದ ವಿಷಯಗಳ ಬಗ್ಗೆ ಮಾತಾಡಿದೆವು. ಅಕ್ಕರೆಯ ಸಲಹೆ ಸೂಚನೆಗಳನ್ನು ನೀಡಿದ ಶಿವಾನಂದ, ಸಮಯವಾಯಿತು ಬರುತ್ತೇನೆಂದು ಹೇಳಿ ಹೊರಟು ಹೋದ. ಆದರೆ ಅದುವೇ ನನ್ನ ಅವನ ಅಂತಿಮ ಭೇಟಿ ಎಂದು ನಾನೆಂದೂ ಕನಸು-ಮನಸಲ್ಲೂ ಊಹಿಸಿರಲಿಲ್ಲ.
             ಅಂದು ಮುಂಜಾನೆ ಸುಮಾರು 5:30 ರ ಸಮಯ, ಅಮ್ಮ ಯಾರದೋ ಫೋನಿಗೆ ಗೊಣಗುತ್ತಿದ್ದಂತಿತ್ತು. ನಾವು ಇನ್ನೂ ಹಾಸಿಗೆಯಲ್ಲಿದ್ದೆವು. "ಅಮ್ಮ, ಎಲ್ಲಿ? ಯಾವಾಗ? ಯಾಕೆ ಹೀಗಾಯಿತು?" ಎಂತೆಲ್ಲಾ ಗೋಗರೆಯುತ್ತಿದ್ದರು. ಆ ಶಬ್ಧಗಳು ನನ್ನ ಕರ್ಣಗಳಿಗೆ ಅಪ್ಪಳಿಸಿದವು. ಎಂದೂ ಅನುಭವಿಸದ ಯಾತನೆಯು ನಿದ್ರಾವಸ್ಥನಾಗಿದ್ದ ನನ್ನನ್ನು ಘಾಸಿಗೊಳಿಸಿತ್ತು. ಹೌದು ಆ ಯಾತನೆ, ಒಳದುಃಖ, ಕಣ್ಣೀರಿಲ್ಲದ ಒಣದುಃಖ, ಮನಸ್ಸು ಭಾರವಾದಂತ ಸ್ಥಿತಿಗಳು ನನ್ನನ್ನು ತೀವ್ರ ಹತಾಶೆಗೆ ಕೊಂಡೊಯ್ದವು. 
ಆಗಿದ್ದಿಷ್ಟೇ.........
            ಅಂದು ಸ್ವಾತಂತ್ರ್ಯ ದಿನೋತ್ಸವ, ಅಣ್ಣತಂಗಿ ಈರ್ವರು ಜತೆಯಲ್ಲೇ ತಮ್ಮ-ತಮ್ಮ ಕಾಲೇಜು-ಶಾಲೆಗೆ ಹೋಗಿದ್ದರು. ಅಂದಿನ ದಿನದ ಕಾರ್ಯಕ್ರಮಗಳು ಮುಗಿದ ಮೇಲೆ ಶಿವಾನಂದನು ಆತನ ಸ್ನೇಹಿತರೊಡಗೂಡಿ ಸಿನಿಮಾ(ರಾಜ್) ನೋಡಲು ತೆರಳಿದ್ದನಂತೆ. ಅಣ್ಣನ ದಾರಿ ಕಾದು-ಕಾದು ಕಡೆಗೆ ತಂಗಿಯೊಬ್ಬಳೇ ಮನೆಗೆ ಹಿಂತಿರುಗಿ ಬಂದಿದ್ದಾಳೆ.. ಅಣ್ಣನ ಅನುಪಸ್ಥಿತಿಯ ಕುರಿತು ವಿವರಿಸಿದ್ದಾಳೆ. ಈತನ ಹುಂಬು ನಿರ್ಧಾರದ ಕುರಿತು ಕೆಲ ಕಾಲ ಚರ್ಚೆಯಾಗಿದ್ದಿರಬೇಕು. ನಂತರ ಸಿನಿಮಾ ಮುಗಿಸಿ ಬಂದ ಶಿವಾನಂದ ಬೈಗುಳಗಳಿಗೆ ಗುರಿಯಾದನಂತೆ. ತನ್ನ ತಂದೆ ಏನೇನು ಬೈದನೋ ಸರಿಯಾದ ಮಾಹಿತಿ ಇಲ್ಲ. ಅವರು ಇವರು ಹೇಳಿದ ಪ್ರಕಾರ "ತಂಗಿಯನ್ನು ಒಂಟಿಯಾಗಿ ಬಿಟ್ಟು ಸಿನಿಮಾ ನೋಡಲು ಹೋಗಿದ್ದಿಯಾ!? ನಿನಗಿದೆ ತಾಳು.. ನಾಳೆ ನಿನ್ನ ಕಾಲೇಜಿಗೆ ಬಂದು ಎಲ್ಲರೆದುರು ನಿನ್ನ ಮಾನ ಕಳಿತಿನಿ" ಎಂದಷ್ಟೇ ಗದರಿದನಂತೆ.. ಈ ಮಾತುಗಳನ್ನು ಆಲಿಸಿದ ಶಿವಾನಂದ ತಮ್ಮ ತೋಟದ ಕೃಷಿ ಸಾಮಾನುಗಳನ್ನಿಟ್ಟಿದ್ದ ಕೊಠಡಿಗೆ ತೆರಳಿ ಅಲ್ಲೇ ಇಟ್ಟಿದ್ದ ಕೀಟನಾಶಕವನ್ನೆತ್ತಿ ಕುಡಿಯಲಾರಂಭಿಸಿದನಂತೆ. ಇದನ್ನು ಕಣ್ಣಾರೆ ಕಂಡ ಆತನ ತಾಯಿ ಏನೂ ತಿಳಿಯದೇ, ಕಕ್ಕಾಬಿಕ್ಕಿಯಾಗಿ ನಿಂತಲ್ಲೇ ಕುಸಿದು ಬಿದ್ದಳಂತೆ. ಈ ಸಂದರ್ಭದಲ್ಲಿ ಇವರಪ್ಪ ಇವನೊಡಗೂಡಿ ಸಿನಿಮಾಗೆ ಹೋಗಿದ್ದ ಸ್ನೇಹಿತರ ವಿಚಾರಿಸಲು ಹೋಗಿದ್ದನಂತೆ. ಪರಿಸ್ಥಿತಿ ಕೈಮೀರುವ ಮೊದಲೇ ಒಂದು ಆಟೋ ಹಿಡಿದು ಆಸ್ಪತ್ರೆಗೆ ಸಾಗಿಸಿದರಂತೆ. ಈ ಹೊತ್ತಿಗಾಗಲೇ ಕೀಟನಾಶಕದ ನಂಜು ಶರೀರವನ್ನಾವರಿಸಿತ್ತು. ಕಂಡರಿಯದ ಕ್ಷಣವೊಂದು ಕಣ್ಮುಂದೆ ಕುಣಿಯುತ್ತಿತ್ತು. ಪಾಷಾಣದ ಚಿತ್ರಹಿಂಸೆಗೆ ಜೀವ ನರಳಿ ನರಳಿ ಕೊನೆಯುಸಿರೆಳೆದಿತ್ತು. ಅಂದು ಅತ್ಯಂತ ಭೀಕರವಾದ ವಿಷಯವೊಂದು ನನ್ನೆದೆಯ ಅಪ್ಪಳಿಸಿತ್ತು. ಈ ಎಲ್ಲ ವಿದ್ಯಮಾನಗಳಲ್ಲಿ ನನ್ನನ್ನು ತೀವ್ರ ಕಾಡಿದ ವಿಚಾರವೆಂದರೆ, 'ಆತ ತನ್ನ ಅವಸಾನ ಕಾಲದಲ್ಲಿ ನರಳುತ್ತಾ ಹೊರಳಾಡಿ ಪ್ರಾಣತೆತ್ತನೆನ್ನುವುದು'. ಹೀಗೆ ನೂರಾರು ಅಂತೆ-ಕಂತೆಗಳು ಅವನ ಕಡೆ ಘಳಿಗೆಯನ್ನು ವಿವರಿಸಲ್ಪಡುತ್ತಿದ್ದವು. ದುಃಖದ ನಡುವಣ ಹೀಗೆ ಕೆಲಮಾತುಗಳು ಕಿವಿಗೆ ಬೀಳುತ್ತಿದ್ದದ್ದುಂಟು. "ಕಡೆ ಕ್ಷಣಗಳಲ್ಲಿ ಯಾವುದೇ ವ್ಯಕ್ತಿಯಾದರೂ ಸಹ ತನ್ನ ಪ್ರೀತಿಸುವ ಜೀವಗಳನ್ನು ಒಮ್ಮೆಯಾದರೂ ನೆನಪುಮಾಡಿಕೊಂಡಿರುತ್ತಾನೆ. ಜತೆಗೆ ತನ್ನ ಶೋಚನೀಯ ಸ್ಥಿತಿಯನ್ನು ಕಂಡು ಅಸಹಾಯಕನಾಗಿರುತ್ತಾನೆ" ಹೀಗೆ ಮನೆಯವರೆಲ್ಲರೂ ಮಾತಾಡಿಕೊಳ್ಳುತ್ತಿದ್ದರು. ಆತ ಕಡೆ ಕಾಲದಲ್ಲಿ ನನ್ನ ಬಗ್ಗೆಯೂ ನೆನೆದಿರಬಹುದೇ! ಈ ಪ್ರಶ್ನೆಗೆ ಉತ್ತರ ಯಾರಿಂದ ಬಯಸಲೀ?
            ಅಂದಿನ ಸಂದರ್ಭದಲ್ಲಿ ನನಗೆ ಯಾರದು ತಪ್ಪು? ಯಾರದು ಸರಿ? ಎಂದು ನಿರ್ಣಯಿಸುವುದಿರಲಿ ಕಟುಸತ್ಯವನ್ನೇ ನಂಬಲಾಗಲಿಲ್ಲ. ಕೆಲವೊಮ್ಮೆ ದುಃಖದ ಭರದಲ್ಲಿ " ಬಂಗಾರದಂತ ಹುಡುಗ. ವಿಷಸೇವಿಸುವಷ್ಟು ಅವಿವೇಕಿಯಲ್ಲ. ಅವನು ನಂಜನ್ನೇ ಕುಡಿವಷ್ಟು ಜಿಗುಪ್ಸೆಗೊಂಡಿದ್ದಾನೆ ಎಂದರೆ ಮನೆಯವರು ಏನೋ ಅನ್ನಬಾರದ್ದು ಅಂದಿದ್ದಾರೆ." ಎಂಬ ಕೊರಗು ವ್ಯಕ್ತವಾಗುತ್ತಿತ್ತು. ನಾನು ನನ್ನಲ್ಲೇ ಪರಾಮರ್ಶಿಸಿಸುತ್ತಿದ್ದೆ. ಭಗವಂತ ನೀಡಿರುವ ಈ ಭವ್ಯವಾದ ಬದುಕು, ತನ್ನ ಪ್ರೀತಿಪಾತ್ರರೆಲ್ಲರನ್ನೂ ಮರೆತು ತಮ್ಮ ಪ್ರಾಣಪಕ್ಷಿಯನ್ನೇ ಹಿಂಸಿಸುವ ಧೈರ್ಯ, ಜಿಗುಪ್ಸೆ ಜನರಲ್ಲಿ ಪ್ರಾಪ್ತವಾಗುವುದೇ?! ಈ ವಿಚಾರಗಳಿಗೆ ನನ್ನಲ್ಲಿ ಉತ್ತರವಿರಲೀ ಊಹೆಯು ಏರ್ಪಡಲಿಲ್ಲ. ಹೀಗೂ ಅನ್ನಿಸುತ್ತಿತ್ತು. ಆ ದುಷ್ಟ ವಿದ್ಯಮಾನಗಳು ಮನಸ್ಥಿತಿಯ ಸಂಯಮವನ್ನೇ ನುಚ್ಚುನೂರಾಗಿಸಿ, ತಮ್ಮನ್ನು ಅವಸಾನಗೊಳಿಸುವ ಕಾಲವೇ ಬಂದೊದಗಿದ್ದರೆ ಯಾರು ತಾನೇ, ಏನು ಮಾಡಿಯಾರು? ಎಲ್ಲ ಕಾಲದ ನಿಯಮ!

                    (ಚಿತ್ರಕೃಪೆ: ಅಂತರ್ಜಾಲ)

            ಮುಂದೆ ಅವನ ಪಾರ್ಥೀವವನ್ನು ನಮ್ಮೂರಿಗೆ ಕೊಂಡೊಯ್ದು ಅಗ್ನಿಗೆ ಸ್ಪರ್ಶಿಸಲಾಯಿತು. ನಾನು, ಅಮ್ಮ, ತಮ್ಮ ಯಾರೂ ವಿಧಿ ವಿಧಾನಗಳಿಗೆ ಹೋಗಲಾಗಲಿಲ್ಲ. ಅಪ್ಪ ಮಾತ್ರ ಹೋಗಿ ಕಾರ್ಯ ಮುಗಿಸಿ ಬಂದರು. ತಾನು ಆಡಿ ಬೆಳೆದ ಹೊಲದಂಚಿನಲ್ಲೇ ಅವನ ದೇಹ ಪಂಚಭೂತಗಳಲ್ಲಿ ಲೀನವಾಯಿತು. ನಾನು ಎಷ್ಟೋ ಬಾರಿ ಊರಿಗೆ ಹೋಗಿ ಬಂದಿದ್ದೇನೆ, ಆದರೆ ಒಮ್ಮೆಯೂ ಆತನ ಸಮಾಧಿಯ ಬಳಿ ಹೋಗಿಲ್ಲ. ಸುಮಾರು ಬಾರಿ ಹತ್ತಿರುವಿರುವ ಪವಿತ್ರಸ್ಥಳ ಕೂಡಲ ಬಳಿಯೇ ಸಾಗಿ ಬಂದಿದ್ದೇನೆ. ಇದರ ಹೊರತಾಗಿಯೂ ಅವನ ಸ್ಥಾನಕ್ಕೆ ಭೇಟಿಯಿತ್ತಿಲ್ಲ. ಇದಕ್ಕೆ ಕಾರಣ ಅಸ್ಪಷ್ಟ. ಒಂದು ರೀತಿಯ ಕಳವಳ, ಕೋಪ, ಹತಾಶೆ ಹೀಗೆ ಅನೇಕ ತಲ್ಲಣಗಳು ನನ್ನ ಮನಸ್ಸನ್ನು ಹಿಡಿದಿಟ್ಟು ನನ್ನನ್ನು ಅಲ್ಲಿಗೆ ಹಾಯದಂತೆ  ನಿರ್ಬಂಧಿಸಿವೆ ಎನ್ನಬಹುದು.
            ಅವನ ಕುರಿತ ಚಿಂತನೆ ನನ್ನನ್ನು ಅಲ್ಲಿಗೆ ನಿಲ್ಲಿಸುವುದಿಲ್ಲ. ನಾನು ಹಲವಾರು ಬಾರಿ ಯೋಚಿಸುತ್ತಾ, ಹೀಗಂದುಕೊಳ್ಳುತ್ತೇನೆ. ಶಿವಾನಂದನಿಗೆ ತಾನು ವಿಷಸೇವಿಸುವಾಗ ಬೇರೆ ಪ್ರಪಂಚ ಅವನ ಕಣ್ಣೆದುರು ಸುಳಿಯಲೇ ಇಲ್ಲವೇ? ಅವನ ಮನಸ್ಸಿಗೆ ಕೇವಲ ತನ್ನ ತಂದೆಯ ಮೇಲಿನ ಕೋಪ ಅಥವಾ ಅವರಿಂದ ಅಪಮಾನಗೊಳ್ಳುತ್ತೇನೆಂಬ ಭಯವೇ ಆವರಿಸಿತೇ? ಒಂದು ಕ್ಷಣ ಇವೆಲ್ಲವುಗಳನ್ನೂ  ಬದಿಗಿಟ್ಟು ನನಗೂ ಕುಟುಂಬವಿದೆ, ಸಾಲದಕ್ಕೆ ಪ್ರೀತಿಪಾತ್ರ ಸ್ನೇಹಿತರಿದ್ದಾರೆ, ಎಲ್ಲದಕ್ಕೂ ಮಿಗಿಲಾಗಿ ಭವ್ಯ ಅಪೂರ್ಣ ಬದುಕು ನನ್ನ ಮುಂದಿದೆ., ಎಂದು ಅವನಿಗನ್ನಿಸಿದ್ದರೆ ಶಿವಾನಂದ ನಮ್ಮಿಂದ ದೂರವಾಗುತ್ತಿರಲಿಲ್ಲ.
         
ಅಂತರಾಳ ಒಮ್ಮೊಮ್ಮೆ ಹೀಗೂ ಕನವರಿಸುವುದುಂಟು.
.
.
ಮರೆಯಾದ ಮಾಣಿಕ್ಯವ ಎಲ್ಲಿಂದ ಪಡೆಯಲೀ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಮೌನಜ್ವಾಲೆ

ಹಾಡು ಬರೆಯಬೇಕು ಅಳುವ ಮರೆಯಬೇಕು ಮಾತು ಮುಗಿದ ಮೇಲೆ ವಿರಹ ಮೌನಜ್ವಾಲೆ! ಯಾವ ಭೀತಿಯಲ್ಲಿ ಯಾರ ಪ್ರೀತಿಯಲ್ಲಿ ಏನೂ ಹೇಳಲಾರೆನು ಕೂಡಿ-ಕಳೆಯಲಾರೆನು! ಅಂದವಾದ ಮೈಸಿರಿ ಕಳೆದು...