ಬುಧವಾರ, ಡಿಸೆಂಬರ್ 18, 2024

ಅಲೆವ ದುಂಬಿ

ಚಿತ್ರಕೃಪೆ : ಅಂತರ್ಜಾಲ 





 

ಕಣ್ಣ ತುಂಬ ಹಸಿರು ತುಂಬಿ 

ಮನಸು ಈಗ ಅಲೆವ ದುಂಬಿ!


ಜೀಪು ಹತ್ತಿ ಕುಳಿತೆವು..

ಅಗ್ಗು ತಗ್ಗು ಜಿಗಿದವು!!.

ಧೂಳು ದಣಿವು ಅಂಟಲಿಲ್ಲ 

ಕೂಡಿ ನಡೆದು ಮರೆತೆವೆಲ್ಲ!!


ಗಿರಿಯ ತುದಿಯ ಹಾದಿಯಲ್ಲಿ 

ತಂಪು ಗಾಳಿ ಸೋಂಕಿದೊಡನೆ 

ನೀಲಿ ಬಾನು ಕೆಳಗೆ ಇಳಿದು,

ಮಿನುಗು ಭಾನು ಕಣ್ಣ ಹೊಡೆದು,

ಸನ್ನೆಯಲ್ಲೇ ಎಲ್ಲರನ್ನು ಬಳಿಗೆ ಕರೆದನು 

ಸ್ವರ್ಗದಂಚಿನಲ್ಲಿ ನಮ್ಮ ಬಿಟ್ಟು ಹೋದನು!!


ಸಗ್ಗದಿಂದ ಕೆಳಗೆ ಇಳಿದು,

ಗಂಗೆಯೊಲವ ಅರಸಿ ನಿಂತು,

ಹರಿವ ಜಲದ ಮೂಲ ಅರಸಿ ಹೋದೆವಲ್ಲಿಗೆ!

ಕೊರೆವ ನೀರ ಗರ್ಭದಲ್ಲಿ ಜಿಗಿದೋ ಮೆಲ್ಲಗೆ!!


ಜಾರೋ ಬಂಡೆ, ಚೂಪು ಕಲ್ಲು ಪಾದಗಳಿಗೆ ವೇದನೆ,

ಶೀತ ಶರಧಿ ಮಡಿಲಿನಲ್ಲಿ, ನಿಸರ್ಗದ ಆರಾಧನೆ!!


ನನ್ನ ಗೆಲುವು ನಿನ್ನದೆಂದು 

ನಿನ್ನ ನಲಿವು ನನ್ನದೆಂದು 

ಅರಿತು ಬೆರೆತು ನಿಲ್ಲೋ ವಯಸ್ಸು, ಇಂದು ನಾಳೆಗೆ!

 ಹಂಚಿ ಕುಡಿವ ಶುದ್ಧ ಮನಸ್ಸು, ನಮ್ಮ ಬಳಗಕೆ!!


ಪರಮಾತ್ಮನ ಒಳಗೆ ಇಳಿಸಿ 

ನರನಾಡಿಯ ಚುರುಕುಗೊಳಿಸಿ 

ಹರಟೆ ಹೊಡೆವ ಸೂಕ್ತ ಕಾಲ, ಮತ್ತೆ ಸಿಗುವುದೇ?

ನಮಗೆ, ಮತ್ತೆ ಸಿಗುವುದೇ?


ನಡು ನೀರಲಿ ಬಿಟ್ಟು ಹೋದ 

ಭಾವ-ಬಂಧ ಕೆಡಿಸಿ ಹೋದ 

ವ್ಯಕ್ತಿಗತ ಬಳಸಿ ಬರುವ, 

ಹತ್ತು ಹಲವು ಕಥೆಗಳು!

ಅವರಿಗವರದೇ ವ್ಯಥೆಗಳು!!

ಈ ಮಧ್ಯೆ, ಅವರೆಲ್ಲಾ 

ಕ್ಷಣಿಕ ಕಾಲ ದುಃಖ ಮರೆತು ಕುಣಿಯುತ್ತಿದ್ದರು!

ಬದುಕ ಶೂನ್ಯ ಬದಿಗೆ ಸರಿಸಿ ಹಾಡುತ್ತಿದ್ದರು!!

ಆದ್ದರಿಂದ,

ಆಲ್ಕೋಹಾಲಲು ಹಾಲಿದೆ!

ಎಲ್ಲರ ನೋವಲು ಪಾಲಿದೆ!!


~ ಎಂ.ಕೆ. ಹರಕೆ 






ಶುಕ್ರವಾರ, ಡಿಸೆಂಬರ್ 13, 2024

ಅವನು - ಅವಳು

ಹೀಗೊಂದು ಸನ್ನಿವೇಶ!!

.

.


 ಅಂಜದೆ ಅಳುಕದೆ ಹಿಗ್ಗದೆ ಕುಗ್ಗದೆ   

 ನಲಿಯುತ ನಗಿಸುತ ಅವನಿದ್ದ!

 ಹಾಗೆಯೇ ಸುಮ್ಮನೆ, ಒಮ್ಮಿಂದೊಮ್ಮೆಲೆ

 ತಲುಪಿತು ಅವಳ ಕಿರುವರದಿ!


 ಮಲೆಗಳ ಸಾಗರ ಹಸಿರಿನ ಬೀಡದು

 ಅವಳಿಗೆ ದೊರೆತ ಗಮ್ಯ ಸ್ಥಾನ!

 ದುಡಿಮೆಯ ಆಗರ, ಟ್ರಾಫಿಕ್ನ ತವರು 

 ಅವನಿಗೆ ಒಲಿದ ಭವ್ಯ ತಾಣ!!


 ಮನಸಲಿ ಕಾತುರ ಬಯಕೆಗಳೆಷ್ಟೋ?

 ಕುತೂಹಲ ಕುಹೂ ಕುಹೂ ಕೂಗುತಿದೆ!

 ಇನ್ಸ್ಟಾ- ಫೇಸ್ಬುಕ್, ಎಲ್ಲೆಡೆ ತೀವ್ರ 

 ಅವಳದೇ ಹುಡುಕಾಟ ನಡೆಯುತಿದೆ !!


ಚಿತ್ರಕೃಪೆ : ಅಂತರ್ಜಾಲ


 ಸಿಕ್ಕಿತೋ ಸಿಕ್ಕಿತು ಎಂದೂ ಕಾಣದ

 ಅಪರೂಪದ ಮಿಂಚಿನ ಅವಳ ಮೊಗ!

 ಉಕ್ಕಿತೋ ಉಕ್ಕಿತು, ಮರುಕ್ಷಣದಲ್ಲಿಯೇ 

 ಪ್ರೇಮದ ರೀತಿಯ ಮಧುರ ಸುಖ!!


 ಧೈರ್ಯದಿ ಚಕ್ಕನೆ, ಇನ್ಸ್ಟಾ ಪುಟದಲ್ಲಿ

 ಕಳಿಸಿದನಾಕೆಗೆ ರಿಕ್ವೆಸ್ಟು!

 ಕಾದನು ಕಾದನು ದಿನರಾತ್ರಿಗಳನು 

 ಬಾರದು ಅವಳ ಅಕ್ಸೆಪ್ಟು!!


 ಬಯಕೆಯ ಬೇಗುದಿ ಸುಂದರ ಸ್ಮರಣಿಕೆ

 ತಿವಿಯುತ ಕುಣಿದವು ಮನದೊಳಗೆ!

 ಅವಸರದಾಹುತಿ; ಅಳುಕಿನ ಅಂಜಿಕೆ

 ಮನೆಮಾಡಿದವು ಅವನೊಳಗೆ!!


 ತಿಳಿಯದು ತೀರದು ಇವರೀರ್ವರ ಕಥೆ

 ಎಲ್ಲಿಗೆ ಹೋಗಿ ಮುಟ್ಟುವುದೋ?

 ಒಂದೇ ಕೌತುಕ, ನನ್ನಯ ಪಾಲಿಗೆ

 ಅವರಿಬ್ಬರ ಮಿಲನ ಎಂದಾಗುವುದೋ?

.

.

.

ಬೇಗ ಆಗ್ಲಿ ಅಷ್ಟೇ, ಏನಂತೀರಾ?

~ಎಂ ಕೆ ಹರಕೆ 


ಅಂಬೇಡ್ಕರ್!

 ನಿನ್ನ ಹೆಸರು ಕೇಳಿದರೆ ಗರ್ವ ಪಡಬೇಕಿದ್ದ ಜನ, ನಿನ್ನನ್ನು ಕೇವಲ ಒಂದು ವಿಷಯಕ್ಕೆ ಸೀಮಿತಗೊಳಿಸಿ ಕನಿಷ್ಠರಾಗಿದ್ದಾರೆ! ನಿನ್ನ ಕುರಿತು ಒಂದು ಪುಟ ಓದದ ಜನ, ನಿನ್ನನ್ನು ಗ...