ನಿನ್ನ ಹೆಸರು ಕೇಳಿದರೆ ಗರ್ವ ಪಡಬೇಕಿದ್ದ ಜನ,
ನಿನ್ನನ್ನು ಕೇವಲ ಒಂದು ವಿಷಯಕ್ಕೆ ಸೀಮಿತಗೊಳಿಸಿ ಕನಿಷ್ಠರಾಗಿದ್ದಾರೆ!ನಿನ್ನ ಕುರಿತು ಒಂದು ಪುಟ ಓದದ ಜನ,
ನಿನ್ನನ್ನು ಗಂಟೆಗಟ್ಟಲೆ ನಿಂದಿಸಿ ಭಾಷಣ ಹೊಡೆಯುತ್ತಾರೆ!
ನಿನ್ನ ಅಪರಿಮಿತ ಜ್ಞಾನದ ಅರಿವಿಲ್ಲದ ಜನ,
ನೀ ರಚಿಸಿದ ಸಂವಿಧಾನವನ್ನು ಕಾಪಿ-ಪೇಸ್ಟ್ ಎನ್ನುತ್ತಾರೆ!
ಸಂವಿಧಾನ ತಿದ್ದುಪಡಿಗು, ಬದಲಾವಣೆಗೂ ವ್ಯತ್ಯಾಸ ಗೊತ್ತಿಲ್ಲದವರೂ ಶಿಳ್ಳೆ ಹೊಡೆದು ಕೇಕೆ ಹಾಕುತ್ತಾರೆ!
ನಿನ್ನ ಹೆಸರಲ್ಲಿ ಜೈಕಾರ ಹಾಕುವವರು ಸಹ,
ನಿನ್ನ ದೀರ್ಘವಾಗಿ ಓದಲಿಲ್ಲ, ನಿನ್ನ ಅಂತರಾಳ ಮುಟ್ಟಲಿಲ್ಲ!!
ನಿನ್ನ ಕಾಲದ ಯಾವ ಮಹಾತ್ಮರಿಗೂ ನೀ ಕ್ಯಾರೆ ಅನ್ನದೇ,
ತೋರಿದ ಗಟ್ಟಿತನ, ಸ್ಪಷ್ಟ ನಿಲುವು ಇಂದಿನವರಿಗಿಲ್ಲ!!
ನೀನು ಸಂದರ್ಭ ಅರಿತು ಎಲ್ಲರನ್ನು ಒಪ್ಪಿ ನಡೆದೆ,
ಆದರೆ ಜನ ನಿನ್ನ-ಅವರ ನಡುವೆ ತಂದಿಟ್ಟು ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ!!
ಸಮಾಜದ ಎಲ್ಲ ಸ್ತರದ ಮಹಿಳೆಯರು ಇಂದು,
ಆಕಾಶಕ್ಕೆ ಮುಟ್ಟುವ ಸಾಧನೆ ಮಾಡುತ್ತಿದ್ದಾರೆ;
ಸಮಾಜದ ಎಲ್ಲ ಸ್ತರದ ಜನ, ಸಮಸಮಾಜದ
ನೆಲೆಯಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುತ್ತಿದ್ದಾರೆ...
ಇದೆಲ್ಲ ನಿನ್ನ ಅಂತರ್ದರ್ಶನದ ದಿವ್ಯಫಲ!!
ನಿನ್ನ ಹೋರಾಟದ ಬದುಕಿಗೆ ಶರಣು!!
ನಿನ್ನ ಹೆಸರು ಸಂಪ್ರೀತಿಯಿಂದ ಎಲ್ಲರೆದೆಯಲ್ಲಿ ಸ್ಥಿರಗೊಳ್ಳಲಿ!!
~ ಎಂ ಕೆ ಹರಕೆ
