ಶುಕ್ರವಾರ, ಜನವರಿ 12, 2018

ಚುಟುಕು ಸಾಹಿತ್ಯ🏃

                                                          ಚಿತ್ರಕೃಪೆ:ಅಂತರ್ಜಾಲ

                   ★ "ಕವಿತೆ" ★
ಪ್ರಾಸಗಳ ಹುಡುಕುತ್ತಾ ಸವೆಯಿತು ಕವಿ ಹೃದಯ
ಕವಿತೆಯನ್ನೇ ಧಿಕ್ಕರಿಸಿ ಸಾಗಿತ್ತು ಆ ಸಮಯ!
ಸಮಯಾಸಮಯದಿ, ಕಂಡನಾ ಭವ್ಯ ರೂಪ
ಬರೀ ಕನಸಲ್ಲೇ ಆ ಕನ್ಯೆಗೆ ತಾನಾದನು ಭೂಪ!
ಅಮೃತದ ಘಳಿಗೆಯಲಿ ನೂರಾರು ಸಿಹಿಗನಸು
ಕನಸಿನ ಸಾಮ್ರಾಜ್ಯಕ್ಕೆ ತಾನೇ ಪಟ್ಟದರಸು!
ನಿತ್ಯವೂ ಕೌತುಕದಿ ಶೃಂಗಾರ ಪ್ರಣಯ ಗೀತೆ
ರೋಸಿದ ಕವಿ-ಹೃದಯಕ್ಕೆ ಹೊಳೆಯಿತು ಈ ಕವಿತೆ!!


                      ◆"ಜೀವನ"◆
ಭವನೆ ಬೇಗೆಗಳಿಗೆ ಕೊನೆಯಿಲ್ಲದ ಜೀವನ
ಪ್ರೀತಿ-ಮಮತೆ,ವಾತ್ಸಲ್ಯ ಬಿತ್ತರಿಸುವ ಜೀವನ
ಹಬ್ಬ-ಹರಿದಿನಗಳಂತೆ ವಿಜೃಂಭಿಸುವ ಜೀವನ
ಮನದ ನಕಾಶೆಯನ್ನು ಪ್ರತಿಬಿಂಬಿಸುವ ಜೀವನ!!
ಜೀವ ಎಂಬೆರಡಕ್ಷರಕ್ಕೆ ತಾನಾಗಿರುವ 'ಜೀವ'ನ
ಸಂಸ್ಕಾರವೆಂಬುದರಿಯದೇ ಒದ್ದಾಡುವ ಜೀವನ
ಸಾಧನೆಯ ಮಡಿಲನ್ನು ಕಂಡರಿಯದ ಜೀವನ
ಕಾಣದ ಆ ಪಥವ ಅರಸುತ್ತಿರುವ ಜೀವನ!!


                    ■ ಸಾಧನೆ ■
ಗುರಿ-ಸಾಧನೆಯೆಂಬುದು 'ಸ್ವಾರ್ಥ'ವೇ?
ತ್ಯಾಗ,ಪರಹಿತಕ್ಕಿಂತ ಮಿಗಿಲಾದುದಿಲ್ಲವೇ?
ಕಪಟ-ಮೋಸದ ಸಮಾಜ ನೋಡಲು ಸುಂದರವೇ?
ಅಥವಾ ಕಾಣುವ ನಮ್ಮ ನಯನಗಳೇ ಅಶಕ್ತವೇ?!
ಬಿಳಿಹಾಳೆಯಲ್ಲಿನ ಕರಿಚುಕ್ಕಿಯೇ ವಿಶೇಷ
ವ್ಯಕ್ತಿತ್ವಕ್ಕೆ ಕಡೆಗೆ ಸಾಧನೆಯೇ ಶೇಷ....
ಅಮರವಾಗುವವು ವ್ಯಕ್ತಿಯ ಬರಹ-ಕವಿತೆ ಮಾತ್ರ
ಆದರದರಲ್ಲಿರಲಿ ನಿಷ್ಕಲ್ಮಶ ಪ್ರೀತಿ-ಭಾವಗಳ ಸೂತ್ರ..





                        ◆  ತೃಪ್ತಿ  ◆
ಚಿಂತೆಯೆಂಬ  ಚಿತೆಯಲ್ಲಿ ಬೇಯದೆ,
ನಗುವೆಂಬ ಬಾಳಧರಣಿಯಲ್ಲಿ ಬದುಕು.....
ಅತಿಯಾಸೆಯೆಂಬ ಆನೆಯ ಬಯಸದೆ,
ತೃಪ್ತಿಯೆಂಬ ನಾಯಿ ಕುನ್ನಿಯನು ಸಾಕು....

ಶನಿವಾರ, ಜನವರಿ 6, 2018

ಹೇಗಿರುವಳು ಈಗ? ಮೊಗ್ಗಂತ್ತಿದ್ದಳು ಆಗ!

"ಹುಚ್ಚುಕೋಡಿ ಮನಸು ಹದಿನಾರರ ವಯಸ್ಸು",ಎಂಬಂತೆ ಹದಿಹರೆಯದಲ್ಲಿ ಪ್ರತಿಯೊಬ್ಬರಿಗೂ ನೂರಾರು ಹೊಸ-ಭಾವಗಳ ಪರಿಚಯವಾಗುತ್ತದೆ.. ಆದರೆ ಅದರ ಮಿತಿಯನ್ನ ಊಹಿಸಲೂ ಅಸಾಧ್ಯ.ಹೀಗೆ ನನ್ನ ಗೆಳೆಯನೊಬ್ಬ, ತನ್ನ ಹಳೆಯ ಹುಡುಗಿಯನ್ನು  ನೆನೆದು facebookನಲ್ಲಿ ಒಮ್ಮೆ ಈಗ ಹೇಗಿರಬಹುದು?ಎಂಬ ಕಲ್ಪನೆಯಲ್ಲಿ ಶೋಧ  ಮಾಡಲೆತ್ನಿಸಿದ ಸಂಧರ್ಭವೇ ಈ ಕವಿತೆಯ ಮೂಲ...

ಮುಂದೆ ಏನಾಯಿತು?!...

ಇಲ್ಲಿದೆ ಉತ್ತರ..👇

ಬಾಳರಸಿಯ ನೆನಪಿನಲಿ ತೆರೆಯಿತು ಮುಖಪುಸ್ತಕ
ನೂರಾರು ಕಲ್ಪನೆಗಳು ಹೃದಯದ ಒಳ ಕೋಣೆಯಲಿ....
ಹದಿನಾರರ ವಯಸ್ಸಿನಲ್ಲೇ ಚಿತ್ತಾರ ಮೂಡಿಸಿದ;
ನಸುನಗೆಯ ಬಿತ್ತರಿಪ ಚೆಲುವಾಂಬೆ ಆಕೆ!!

ಹೇಗಿರುವಳು ಈಗ? ಮೊಗ್ಗಂತ್ತಿದ್ದಳು ಆಗ!
ಅರಳಿದ ಹೂವಿನ ಹಾಗೆ ಘಮಘಮಿಸುತಿರುವಳೇ?
ಇಲ್ಲ...,
ಘಾಸಿದ ಪುಷ್ಪದಂತೆ ಮೈಮುದುಡಿ ಕೂತಿಹಳೇ?
ಹೇಗಿದ್ದರೇನವಳು..?! ಗುಂಡಿಗೆಯನು ಕದ್ದೊಯ್ದಿರಲು!

ತಾಸುಗಟ್ಟಲೆ ಶೋಧಿಸಿ ಸಂಧಿಸಿದನವಳ ಪುಟವ..
ಹೇಗೆ ಹೇಳಲಿ ಈಗ,ಹರ್ಷೋದ್ಘಾರದ ಭಾವ!
ಮತ್ತೊಮ್ಮೆ-ಮಗದೊಮ್ಮೆ  ಎಡೆಬಿಡದೆ ಪರೀಕ್ಷಿಷಿದ
ಅವಳದೇ ಈ ಮೊಗವೆಂದು, ತನ್ನೊಳಗೆ ಪರಮ ತೃಪ್ತನಾದ!

ಕಲಿಯುಗದ ಅಂತರ್ಜಾಲದಲಿ ಜಾರುವುದು ಒಂದೇ,
ದ್ವಾಪರದ ಚಕ್ರವ್ಯೂಹದೋಳು ಸಿಲುಕೋದೂ ಒಂದೇ!
ಅಭಿಮನ್ಯುವಿನಂತೆ ಮನಸ್ಸು ಜಾಲದಲಿ ಮರೆಯಾಗಿದೆ..
ಬ್ಯಾಟರಿ ಕ್ಷೀಣಿಸದ ಹೊರತು ಭೇದಿಸಲಾಗದು ಜಾಲ!

ಕ್ಷೀಣಿತ ಅಧಿಸೂಚನೆ ಒಡನೆ ಹೊರಹೊಮ್ಮಿರಲು
ಗಡಿ-ಬಿಡಿಯಲಿ ಕಡೆ ಸಾಲು ಇವನ ಕಣ್ಗೆ ಬಿದ್ದಿರಲು ...
ಬರೆದಿದ್ದಳು ಆಕೆ, ಭಾವೀಪ್ರಿಯತಮನನ್ನೇ ಕುರಿತು;
"ನಿಶ್ಚಯವಾಗಿಹ ವಿಷಯ,ಕಂಡೊಡನೆ ಆವರಿಸಿತು ಮೌನ!!

ಸಮಯ ಈಗಾಗಲೇ ನಡುರಾತ್ರಿಯ ದಾಟಿದೆ,
ಉಲ್ಲಾಸದ ಕ್ಷಣವೀಗ, ಕಣ್ಣೀರಿಗೆ ಬದಲಾಗಿದೆ!
ಕಣ್ಣಿನಂಚಿನ ಅಶ್ರು, ಧಾರೆಯನೆ ಹರಿಸಿರಲು
ಉಕ್ಕುತಿಹ ಭಾವೋದ್ವೇಗದಲಿ ನಿದ್ರಿಸಿತು ಬಡಜೀವ!!

                                     -ಎಂ .ಕೆ.ಹರಕೆ

ಮೌನಜ್ವಾಲೆ

ಹಾಡು ಬರೆಯಬೇಕು ಅಳುವ ಮರೆಯಬೇಕು ಮಾತು ಮುಗಿದ ಮೇಲೆ ವಿರಹ ಮೌನಜ್ವಾಲೆ! ಯಾವ ಭೀತಿಯಲ್ಲಿ ಯಾರ ಪ್ರೀತಿಯಲ್ಲಿ ಏನೂ ಹೇಳಲಾರೆನು ಕೂಡಿ-ಕಳೆಯಲಾರೆನು! ಅಂದವಾದ ಮೈಸಿರಿ ಕಳೆದು...