ಭಾನುವಾರ, ಡಿಸೆಂಬರ್ 24, 2017

ಕಾವ್ಯ ಲಹರಿ

   
             ■ ಟ್ರಾಫಿಕ್ ಬದುಕು ■

ಬರಿದಾದ ಬದುಕಲೀ ನಾ ಏನ ಹೇಳಲಿ?
ತುಂಬಿದ ಗಾಡಿಯು ನಿಂತಿದೆ ನಡುದಾರೀಲಿ!!
ಮುಂದಕ್ಕೆ ಹೋಗದು; ಹಿಂದಕ್ಕೆ ಬಾರದು
ಆದರೂ ಸೌಖ್ಯವಿದೆ ಈ ಬಾಳ ಪಯಣದಲಿ..

ನೂರಾರು ಗಾಡಿಗಳು ಅಡಿಗಡಿಗೆ ನಿಂತಿವೆ,
ಮುಂದಾಗಿ ನಾಮುಂದು ತಾಮುಂದು ಎನ್ನುತಿವೆ!
ಬಿಳಿಪಟ್ಟಿಯ ಹಾದೀಲಿ ಸಾಗುವುದೇ ಬಲುಮೇಲು
ಯಾಕಯ್ಯ? ಈ ಬೇನೆ ಕತ್ತ ಹಿಸುಕಿದಂತಿದೆ...!

ಹಿಂದಿದ್ದ ಮೋಟಾರೀಗ ಪಕ್ಕದಲಿ ನಿಂತಿದೆ
ಮುನ್ನುಗ್ಗುವ ಬರದಲ್ಲಿ ಪೈಪೋಟಿ ನೀಡುತಿದೆ..
ಬಸ್ಸಾದರೇನು?ಕಾರಾದರೇನು? ಭಗವಂತನ 
ಈ ಬವಣೆಯ ಅನುಭವಿಸದೆ ವಿಧಿಯಿಲ್ಲ!!

ಕೆಲವೊಮ್ಮೆ ಹೀಗನ್ನಿಸುತ್ತದೆ...
ಮೋಟಾರು ಬಿಟ್ಟು ನಡೆದೇ ನಾ ಗುರಿಮುಟ್ಟಲೇ?!
ಮರುಕ್ಷಣವೇ.... ಆತ್ಮಾವಲೋಕನ-
"ನಿಸರ್ಗ ನಿಯಮ ಉಲ್ಲಂಘಿಸಿ ಬಾಳು ಸಾಗಲು ಸಾಧ್ಯವೇ?"
                         
                               -ಎಂ.ಕೆ.ಹರಕೆ





                   ◆  ರೈತನ ದನಿ ◆

ಕೇಳಿಸಿತು ಈ ಕಾಲದಿ ಅನ್ನದಾತನ ಅಳಲು
ಹೊರಟಿತು ಎನ್ನಯ ಕಾಯ ಅವನಿದ್ದ ಕಣರಂಗಕೆ....
ಮನಸ್ಸಿಲ್ಲದೆ ಸಾಗಿದ ಈ ಹೃದಯ ಬಾಗಿಲು
ತೆರೆಯಿತು ಮರೆಯಲ್ಲಿ ನಿಧಾನ ಕೃಷಿ ಕಾಯಕಕ್ಕೆ...

ಕೃಷಿ ಕೇವಲ ರೈತನಭ್ಯುಯದ ಕಾಯಕವಲ್ಲ 
ರಿಷಿ-ಸಂತರೂ ಕೈಮುಗಿದು ಸೇವಿಪ ಭಿಕ್ಷಾನ್ನ...
ಪ್ರತಿ ಜನ-ಮನವೂ ದಿನನಿತ್ಯ ಭೋಗಿಸುವ ಆಹಾರ 
ರೈತನ ಬೆಳೆಯಿಂದಲೇ ಜಾನುವಾರಗಳಿಗೂ ಮೇವು...

ರೈತ........?
ತೀಕ್ಷ್ಣ ವಿಷಯದಿ ಬೆರೆತು ತಾ ಮೈಮರೆಯಲಾರ
ಅವನ ಕಾರ್ಯದಲಿ ವಿಜ್ಞಾನ ಅಡಗಿರುವುದವನಿಗರಿವಿಲ್ಲ...
ಭತ್ತ ಕೇರುವ ಮುನ್ನ ಸಾಂದ್ರತೆ ಪರೀಕ್ಷಿಸಲಾರ
ಆದರೂ ಮಹಾಜ್ಞಾನವಂತನು ಕೃಷಿ ವಿಜ್ಞಾನ ಭೋದೆಯಲಿ....

ರಸಋಷಿಯ ಕಾವ್ಯದಲಿ ರೈತ-ನೇಗಿಲಯೋಗಿ
ಕಾಯಕದಲ್ಲೇ ದೇವರ ಕಾಣುವ ಮಹಾತ್ಯಾಗಿ....
ಪರಿಶ್ರಮದ ಕೂಸಾಗಿ ಗೇಯುವನು ಪ್ರತಿನಿತ್ಯ 
ಕಿಂಚಿತ್ತೂ ತನಗಾಗಿ ಗಳಿಸಿಲ್ಲ ಇದು ಸತ್ಯ....

ಸೈನಿಕನ ಆರ್ಭಟ ಕೇಳ್ಪುದು ರಣರಂಗದಲಿ
ರೈತನ ಹೋರಾಟ ತಾ ದುಡಿವ ಕಣದಂಗಳದಲಿ...
ಶಾಸ್ತ್ರಿಯ ಘೋಷಣೆಗೆ ಇವರೀರ್ವರೆ ಸ್ಫೂರ್ತಿ
ಕಣ-ಕಣದಲೂ ಮೊಳಗಲಿ "ಜೈ ಜವಾನ್, ಜೈ ಕಿಸಾನ್"..
                        
                                         -ಎಂ. ಕೆ. ಹರಕೆ





              ■ ಪ್ರೇಮಾಂತರಂಗ ■

ಸಹಸ್ರಾರು ದ್ವೀಪ,ಸುರಂಗ,ಮಾಯಾಲೋಕವೆ
ಎದುರಾದರೂ ನಾ ನಿನ್ನ ಬಿಡೆನು ಗೆಳತಿ...
ಬಾರದ ಲೋಕಕ್ಕೆ ಹೊರಟರೂ ನಿನ್ನ ನಾ,ಬಿಡದೆ
ಹಿಂಬಾಲಿಸುವೆ ಪ್ರೇಮಮುಗ್ಧನಂತೆ...
ನಿನ್ನ ಆ ಮೊದಲ ತೊದಲು ಮಾತೇ ಸಾಕು ಎನ್ನ 
ಈ ಹೃದಯಾಂತರಂಗಕೆ....
ನೀನಾಗೆ ಬಾ ಗೆಳತಿ ಎನ್ನ ಹೃದಯ ಮಂದಿರಕೆ
ಪೂಜೆಯ ವೇಳೆಗೆ ನೀ ತಡಮಾಡದೆ 
ಒಲುಮೆಯ ಘಂಟೆಯನು  ಬಾರಿಸುವೆ ಅನುಕ್ಷಣದಿ,
ನಿನ್ನೊಂದಿಗೆ ನಾನಿರುವ ಪ್ರತಿಗಳಿಗೆಯಲೂ...
ಕನಸು-ಮನಸುಗಳು ಬೆರೆತು ಹರುಷದಿ ಕುಣಿದಿರಲು ಪ್ರೇಮಾತರಂಗವು ಭಯದಿಂದ ಕುದಿಯುತಿರೆ...
ಎಲ್ಲಿ ನೀ ನನ್ನ ತ್ಯಜಿಸಿ ಪೋಗುವೆಯೆಂದು  ತನ್ನ 
ತಾನೇ ಬೇಲಿಯನ್ನು ಕಟ್ಟಿಕೊಂಡಿದೆ...
                                  -ಎಂ.ಕೆ.ಹರಕೆ

ಶನಿವಾರ, ಡಿಸೆಂಬರ್ 23, 2017

ಪ್ರಕೃತಿಯ ತಂಪು

ಅತೀವ ತಂಪಿನ ಹಸಿರಾದ ಪ್ರಕೃತಿಯು ಮರೆಯಾದ
ಭಾಸ್ಕರನ ಸ್ವಾಗತಿಸುತಲಿತ್ತು...
ಹನಿಹನಿಯಾಗಿ ಉದುರುವ ಮಂಜಿನ ಹನಿಗಳು
ಮನದ ಅರಿಕೆಯ ಬಡಿದೆಬ್ಬಿಸುತಲಿತ್ತು...

ದೂರದೀ ಎಲ್ಲೋ ಸಂಗೀತದಲೆಗಳು ಕಾಣದ
ಕಣ್ಣಿಗೆ ಅಪ್ಪಳಿಸಿದಂತಿತ್ತು!!
ಬೆಚ್ಚಗೆ ಪಕ್ಕದಲಿ ಮಲಗಿದ್ದ ಕುನ್ನಿಯ ಅಪ್ಪುಗೆಯ
ಕಾವು ಹೃದಯದೊಳ್ ಏರುತ್ತಲಿತ್ತು...

ಹೊರಸಲಿನ ಮುಂಭಾಗ ಹೂತಿದ್ದ ಕಂಬವು
ಪವನನಾರ್ಭಟಕ್ಕೆ ಜೋಲಾಡುತಿತ್ತು..
ನಭದಿಂದ ಹೊರಟ ಮಿಂಚಿನ ಕಿರಣಗಳು
ನಾಮುಂದು ತಾಮುಂದು ಎನ್ನುತಲಿತ್ತು...   
              
ಮೇಘಗಳ ತಿಕ್ಕಾಟಕ್ಕೆ ಹೆದರಿದ ಮಳೆರಾಯ
ಕೇರಿಯ ಕೆರೆಯಲ್ಲಿ ತಲ್ಲೀನನಾದ...
ವರುಣನ ರೌದ್ರನೃತ್ಯಕ್ಕೆ ಒಲೆರಾಯ ನೆನೆ-ನೆನೆದು
ಉರಿಯದೆ ಸುಮ್ಮನಾದ...

ಸುಳಿವೇ ನೀಡದೆ ಒಡನೆ ಬಂದಂತ ವರುಣನ
ಆರ್ಭಟ ಕೇಳುವ ಮಹನೀಹನಾರು?
ದೀಪದ ಬೆಳಕಿಗೆ ಕಣ್ಣಾಗಿ ಕುಳಿತಿರುವ ಹೊಂಬೆಳಕ
ಚೆಲುವೆ ಹೇಳೇ ನೀನಾರು!??

                                     ●ಎಂ.ಕೆ.ಹರಕೆ

ಗುರುವಾರ, ಡಿಸೆಂಬರ್ 21, 2017

ಹಗಲು ಕನಸು

ಕೆಂದುಟಿಯ ಕೆಂಪಿನಲಿ
ಬಿಳಿ ಸೀರೆ ನೀರೆಯಲಿ ನೀ
ಬಂದ  ಆ ಕ್ಷಣವು ಮನೋಹರ.....!!

ಮುಂಗುರುಳ ಸರಿಸುತಲಿ
ಕಿರುನಗೆಯ ಬೀರುತಿರೆ, ಹೊಂಬೆಳಕು
ಸುಳಿಯುತಿದೆ ಮನದಾಳಕ್ಕೀಗ....

ನಿನ್ನ ಅಂದಿನ ನೋಟ
ಮಿಂಚಿನ ವೇಗದ ಸನ್ನೆ, ಗಾಯ
ಮಾಡಿತು ಎನ್ನ ಈ ಪುಟ್ಟ ಹೃದಯಕೆ...

ಏನೆಂದು ಕೇಳಲಿ? ಹೇಗೆ ನಾ
ತಲುಪಲಿ? ಮುಜುಗರದ ಹೃದಯವು
ವಿರಹ ಸುಖ ಅನುಭವಿಸುತಿರೆ.....

ನೀ ಬಂದ ಘಳಿಗೆಯನು
ಪುನಃ ಬಣ್ಣಿಸಲೇನು? ಸಮನಾದುದಿಲ್ಲ
ಪ್ರಿಯೆ ಈ ಹಗಲು ಕನಸಿಗೆ.....!!!
               
                                      -ಎಂ.ಕೆ.ಹರಕೆ 

ಶನಿವಾರ, ಡಿಸೆಂಬರ್ 9, 2017

ಪರಿಭ್ರಮಣೆ..!


 ◆ಪರಿಭ್ರಮಣೆ◆

        ಪರಿಭ್ರಮಿಸು ಎನ್ನೆದೆಯ 
ಒಡಲ ಸುತ್ತುವರೆದು ನಾ ಬೇಡವೆಂದರೂ
            ನೀ ಪೋಗದೆ....
         
       ಕಳವಳದಿ ನಿಟ್ಟುಸಿರ
ಬಿಡದೇ ಪಾಡುವೆ ನಿನ್ನ , ಒಡಲಾಳ
      ಒಂಚೂರು ಬಿಡದೆ..
         
       ಹೊಚ್ಚ ಹೊಸ ಭಾವನೆಯ 
ಮೆಲುಕು ಹಾಕುವ ಮನಕೆ ಸಾಂಗತ್ಯ
       ಕಲ್ಪಿತ ಭಾಗವಾಗಿ....

ಬಾದೇವಿ ಸರಸ್ವತಿಯೇ
ಹೃದಯಾಂತರಾಳಕೆ ಉದಯಿಸಿದ ಸ್ವರವು
        ಕೈ ಜಾರುವ ಮುನ್ನ..

                   
                          -ಎಂ.ಕೆ.ಹರಕೆ

ಭಾನುವಾರ, ಡಿಸೆಂಬರ್ 3, 2017

ಅಪ್ಪನ ಅಂಗಿ

                (ಚಿತ್ರಕೃಪೆ: ಅಂತರ್ಜಾಲ)

ಮರೆಯುವುದು ಹೇಗೆ ಬೆಳೆದ ಆ ದಿನಗಳು? 
ಅಪ್ಪನ ದುಡಿಮೆಯಿಂದ ಸಾಗಿದೆ ನಮ್ಮೀ ಬಾಳು! 
ಉಟ್ಟೆವು,ಉಂಡೆವು ಮೂರೊತ್ತು ತಪ್ಪದೆ 
ಕಾಣದೇ ಕಲಿತೆವು ಒಂದೆರಡಕ್ಷರ||

ಶಾಲೆ-ಕಾಲೇಜು ಕೇಳಿ ಕಲಿಯದ ಮಹಾಜ್ಞಾನಿ 
ನಮ್ಮ ಕಲಿಕೆಗಾಗಿ ಬಸಿಯುತಿಹನು ಬೆವರ ಹನಿ 
ಅಂದಿನಿಂದ ಇಂದಿನವರೆಗೂ ಹರಿದಿಲ್ಲ ನಮ್ಮ ಅರಿವೆ 
ಹೊಲಿದ ಅಂಗಿಯ ತೊಟ್ಟು ತಾನ್ ನಗುವನು ಹರಿದಿಲ್ಲೆಂದು!!

ಪ್ರತಿನಿತ್ಯ ಅನುಕ್ಷಣದಿ ಕಾಯಕದೇ ಜಪ-ತಪ 
ಆಗಾಗ ಒಂದಿಷ್ಟು ಕಾಳಜಿಯ ಪರಿತಾಪ 
ಸಿಟ್ಟಾಗಲಿ, ಮುನಿಸಾಗಲಿ ಬರೀ ಕ್ಷಣಕೆ ಮಾತ್ರವೇ 
ಬಂಗಾರದ ನನ್ನಪ್ಪನ ಕಾಯೋ ನೀ ಶ್ರೀ ಹರಿಯೇ ||



                                                                ~ಎಂ.ಕೆ.ಹರಕೆ 

ಮೌನಜ್ವಾಲೆ

ಹಾಡು ಬರೆಯಬೇಕು ಅಳುವ ಮರೆಯಬೇಕು ಮಾತು ಮುಗಿದ ಮೇಲೆ ವಿರಹ ಮೌನಜ್ವಾಲೆ! ಯಾವ ಭೀತಿಯಲ್ಲಿ ಯಾರ ಪ್ರೀತಿಯಲ್ಲಿ ಏನೂ ಹೇಳಲಾರೆನು ಕೂಡಿ-ಕಳೆಯಲಾರೆನು! ಅಂದವಾದ ಮೈಸಿರಿ ಕಳೆದು...